ಟೊಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇಂದು ಅಖಾಡಕ್ಕೆ ಇಳಿಯಲಿದ್ದಾರೆ. ಭಾರತ ಹಾಕಿ ತಂಡ ಫೈನಲ್ ಮೇಲೆ ಕಣ್ಣಿಟ್ಟಿದೆ.
ಪ್ಯಾರಿಸ್ ಒಲಿಂಪಿಕ್ಸ್ ನ 11ನೇ ದಿನವಾದ ಮಂಗಳವಾರ ಭಾರತ ಎರಡು ಟೂರ್ನಿಗಳಲ್ಲಿ ಪದಕದ ಮೇಲೆ ಕಣ್ಣಿಟ್ಟಿದೆ. ಕಳೆದ ಕೆಲವು ದಿನಗಳಿಂದ ಭಾರತದ ಕ್ರೀಡಾಪಟುಗಳು ಪದಕದ ಹೊಸ್ತಿಲಲ್ಲಿ ಎಡವುತ್ತಿದ್ದಾರೆ. ಇದರಿಂದ ಕನಿಷ್ಠ 5ರಿಂದ 10 ಪದಕಗಳು ಕೂದಲೆಳೆ ಅಂತರದಿಂದ ತಪ್ಪಿದೆ.
ಮನು ಭಾಕರ್ ಸೇರಿದಂತೆ ಭಾರತ ಶೂಟಿಂಗ್ ನಲ್ಲಿ 3 ಕಂಚಿನ ಪದಕ ಗೆದ್ದ ನಂತರ ಇತರ ಕ್ರೀಡೆಗಳಲ್ಲಿ ಯಾವುದೇ ಪದಕ ಇದುವರೆಗೆ ಬಾರದೇ ಇರುವುದು ನಿರಾಸೆ ಮೂಡಿಸಿದೆ. ಅದರಲ್ಲೂ ಬ್ಯಾಡ್ಮಿಂಟನ್ ನಲ್ಲಿ ಎರಡು ಪದಕ ವಿಜೇತೆ ಪಿವಿ ಸಿಂಧು, ಲಕ್ಷ್ಯ ಸೇನ್, ಆರ್ಚರಿಯಲ್ಲಿ ವಿಶ್ವದ ಮಾಜಿ ನಂ.1 ದೀಪಿಕಾ ಕುಮಾರಿ, ಧೀರಜ್ ಸೇರಿದಂತೆ ಬಾಕ್ಸಿಂಗ್ ಮತ್ತು ಕುಸ್ತಿಯಲ್ಲೂ ಇನ್ನೂ ಯಾವುದೇ ಪದಕ ಬಂದಿಲ್ಲ.
ಮಂಗಳವಾರ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ಕಣಕ್ಕಿಳಿಯುತ್ತಿದ್ದು, ಚಿನ್ನದ ಪದಕವನ್ನು ನಿರೀಕ್ಷಿಸಲಾಗುತ್ತಿದೆ. ಮತ್ತೊಂದೆಡೆ ಸೆಮಿಫೈನಲ್ ಪ್ರವೇಶಿಸಿರುವ ಭಾರತ ಹಾಕಿ ತಂಡ ಫೈನಲ್ ಮೇಲೆ ಕಣ್ಣಿಟ್ಟಿದೆ. ಜಾವೆಲಿನ್ ವಿಭಾಗದಲ್ಲಿ ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋನ್ ಜಿನಾ ಕೂಡಾ ಸ್ಪರ್ಧಿಸುತ್ತಿದ್ದಾರೆ.