ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಒಂದೇ ದಿನದಲ್ಲಿ 1 ಕೋಟಿ ರೂ. ಆದಾಯವಾಗಿ ದಾಖಲೆ ಬರೆದಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಹಾಸನಾಂಬೆ ದರ್ಶನಕ್ಕೆ ವಾರಾಂತ್ಯವಾದ ಶನಿವಾರ ಒಂದೇ ದಿನ 1 ಕೋಟಿ ರೂ. ಅಧಿಕ ಆದಾಯ ಟಿಕೆಟ್ ಮಾರಾಟದಿಂದ ಬಂದಿದೆ ಎಂದರು.
ಹಾಸನಾಂಬೆಯ ವಿಶೇಷ ದರ್ಶನಕ್ಕೆ ನಿಗದಿಪಡಿಸಲಾಗಿದ್ದು 1000 ರೂ. ಮುಖಬೆಲೆಯ ಟಿಕೆಟ್ ಮಾರಾಟದಿಂದ 67 ಲಕ್ಷ ರೂ. ಬಂದಿದ್ದರೆ, 300 ರೂ. ಮುಖಬೆಲೆಯ ಟಿಕೆಟ್ ಮಾರಾಟದಿಂದ 35 ಲಕ್ಷ ರೂ. ಆದಾಯ ಬಂದಿದೆ ಎಂದು ಅವರು ತಿಳಿಸಿದರು.
ವಾರಾಂತ್ಯವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆಗೆ ಭೇಟಿ ನೀಡಿದ್ದು, ಪ್ರತಿ ದಿನ 2 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಭಕ್ತರಿಗೆ ಯಾವುದೇ ಗೊಂದಲ ಆಗದಂತೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ಶುಕ್ರವಾರದಿಂದ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮೊದಲ ದಿನ 67 ಲಕ್ಷ ರೂ. ಟಿಕೆಟ್ ಮಾರಾಟದಿಂದ ಆದಾಯ ಬಂದಿತ್ತು. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ದಾಖಲೆ ಎಂದು ಅವರು ಹೇಳಿದರು.
ಕಳೆದ ಬಾರಿ ಹಾಸನಾಂಬೆಗೆ 12 ಕೋಟಿ ರೂ. ಆದಾಯವಾಗಿತ್ತು. ಈ ಬಾರಿ ಕನಿಷ್ಠ 15 ಕೋಟಿ ರೂ. ಆದಾಯ ಆಗುವ ನಿರೀಕ್ಷೆ ಹೊಂದಿದ್ದೇವೆ ಎಂದು ಅವರು ಹೇಳಿದರು.



