ಏಯ್ ಕುಮಾರಸ್ವಾಮಿ, ಏಯ್ ಅಶೋಕ, ಏಯ್ ವಿಜಯೇಂದ್ರ ನಿಮಗೆ ಸಿದ್ದರಾಮಯ್ಯ ರಾಜೀನಾಮೆ ಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲಿಯೇ ಬಿಜೆಪಿ-ಜೆಡಿಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 19 ಸೀಟು ಗೆದ್ದಿರುವ ಕುಮಾರಸ್ವಾಮಿ 136 ಸ್ಥಾನ ಗೆದ್ದಿರುವ ಸರ್ಕಾರವನ್ನು ಬೀಳಿಸಲು ಮುಂದಾಗಿದ್ದಾರೆ. ಭ್ರಷ್ಟಾಚಾರದಿಂದ ಸೋತಿರುವ ಬಿಜೆಪಿ ಜನರ ಬಹುಮತದ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ನಿಮ್ಮ ನೇತೃತ್ವದಲ್ಲಿ ಜೆಡಿಎಸ್ ಗೆದ್ದಿದ್ದು ಕೇವಲ 19 ಸೀಟು. ನನ್ನ ನೇತೃತ್ವದಲ್ಲಿ ಕಾಂಗ್ರೆಸ್ 136 ಸ್ಥಾನ ಗೆದ್ದಿದ್ದೆ. ಬರೀ ಯು ಟರ್ನ್ ಹೊಡೆಯುವ ಕುಮಾರಸ್ವಾಮಿ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಾರೆ. ಯಾವ ನೈತಿಕತೆ ಇಟ್ಟುಕೊಂಡು ರಾಜೀನಾಮೆ ಕೇಳುತ್ತಾರೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಜನರ ಆಶೀರ್ವಾದದಿಂದ ಬಂದಿರುವ ಸರ್ಕಾರ ಜನರಿಗಾಗಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಲು ಎರಡೂ ಪಕ್ಷಗಳು ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿವೆ. 10 ತಿಂಗಳು ಸರ್ಕಾರ ಉಳಿಯಲ್ಲ ಎಂದು ಹೇಳುತ್ತಿದ್ದರು. ಆದರೆ 10 ವರ್ಷ ಆದರೂ ಸರ್ಕಾರ ನಮ್ಮದೇ ಎಂದು ಅವರು ಸ್ಪಷ್ಟಪಡಿಸಿದರು.