ಕಳೆದ 24 ಗಂಟೆಯಲ್ಲಿ 11 ಭಾರತೀಯ ವಿಮಾನಗಳಿಗೆ ಹುಸಿಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಕಳೆದ ಒಂದು ವಾರದಲ್ಲಿ ಹುಸಿಬಾಂಬ್ ಬೆದರಿಕೆಗಳ ಕರೆ 50ಕ್ಕೆ ಏರಿಕೆಯಾಗಿದೆ.
ದೆಹಲಿಯಿಂದ ಲಂಡನ್ ಗೆ ಹೊರಟ್ಟಿದ್ದ ವಿಸ್ತಾರ ವಿಮಾನ (ಯುಕೆ 17) ಬಾಂಬ್ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಜರ್ಮನಿಯ ಫ್ರಾಂಕ್ ಫ್ರುಟ್ ಗೆ ಮಾರ್ಗ ಬದಲಾಯಿಸಲಾಗಿದೆ. ಜೈಪುರ ಮೂಲದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಕ್ಕೆ ಬೆದರಿಕೆ ಬಂದಿದ್ದು, ಕೂಡಲೇ ಅದು ಹುಸಿ ಬಾಂಬ್ ಕರೆ ಎಂದು ತಿಳಿದು ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇದೇ ವೇಳೆ ವಿವಿಧ ಮಾರ್ಗಗಳ ವಿಮಾನಗಳಿಗೂ ಬಾಂಬ್ ಬೆದರಿಕೆ ಕರೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದರ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಒಂದು ವಾರದಿಂದ ಸತತವಾಗಿ ಭಾರತದ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಪದೇಪದೆ ಬರುತ್ತಿವೆ. ಪ್ರಕರಣದಲ್ಲಿ ಈಗಾಗಲೇ ಹರಿಯಾಣ ಮೂಲದ ಯುವಕನನ್ನು ಬಂಧಿಸಲಾಗಿದ್ದು, ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.