ರಾಜ್ಯದಲ್ಲಿ ಡೆಂಗ್ಯೂ ಅಬ್ಬರ ಹೆಚ್ಚಾಗುತ್ತಿದ್ದು, ಸರ್ಕಾರ ಡೆಂಗ್ಯೂ ಕಾಯಿಲೆ ನಿಯಂತ್ರಿಸಲು ಪರದಾಡುತ್ತಿದೆ. ಆದರೆ ಮನೆಯಲ್ಲೇ ಇರುವ ಈ ಪದಾರ್ಥಗಳನ್ನು ಬಳಸಿಕೊಂಡು ಸಿದ್ಧಪಡಿಸಿದ ಕಷಾಯ ಸೇವಿಸಿದರೆ ಡೆಂಗ್ಯೂ ನಿಮ್ಮ ಹತ್ತಿರವೇ ಸುಳಿಯುವುದಿಲ್ಲ. ಆದ್ದರಿಂದ ಮನೆಯಲ್ಲೇ ಕಷಾಯ ಮಾಡಿ ಸೇವಿಸಿ ಡೆಂಗ್ಯೂದಿಂದ ದೂರವಿರಿ.
ಸಾಮಾನ್ಯ ಶೀತ, ಜ್ವರಗಳು ಬಾಧಿಸುವಾಗ ಅಮೃತಬಳ್ಳಿಯ ಕಷಾಯ ಕುಡಿಯುವುದು ಸಾಮಾನ್ಯ. ಆದರೆ ಡೆಂಗ್ಯೂ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅಮೃತ ಬಳ್ಳಿಯನ್ನು ಬಳಸಿಕೊಂಡು ಔಷಧ ತಯಾರಿಸಬಹುದು ಎನ್ನುವುದು ಆಯುರ್ವೇದ ತಜ್ಞರ ಸಲಹೆ.
ಅಮೃತಬಳ್ಳಿಯಲ್ಲಿ ಯಾವುದೇ ವಿಧವಾದ ಜ್ವರ ಶಮನ ಗುಣವಿದೆ. ಬೇವಿನ ಕಡ್ಡಿ ವೈರಲ್ ಫೀವರ್, ಟೈಪಾಯ್ಡ್ ಜ್ವರ, ಮಲೇರಿಯಾ, ಡೆಂಗ್ಯೂ ಜ್ವರ ಹೋಗಲಾಡಿಸುತ್ತದೆ. ಶುಂಠಿಯಲ್ಲಿ ಶ್ವಾಸಕೋಶದ ಸಮಸ್ಯೆಯನ್ನು ಹೋಗಲಾಡಿಸುವ ಶಕ್ತಿ ಇದೆ. ಆದರೆ ಇದರ ಸೇವನೆ ಮಿತ ಪ್ರಮಾಣದಲ್ಲಿರಬೇಕು, ಅದಕ್ಕಾಗಿ ಹತ್ತಿರದ ಆರೋಗ್ಯ ತಜ್ಞರ ಸಲಹೆ ಪಡೆದುಕೊಂಡು ಸೇವಿಸುವುದು ಅಗತ್ಯ.
ಮೊದಲಿಗೆ ಅಮೃತಬಳ್ಳಿಯ ಕಾಂಡ, ಬೇವಿನ ಕಡ್ಡಿ, ಹಸಿ ಶುಂಠಿ, ನಿಂಬೆ ರಸ, ಜೇನುತುಪ್ಪಗಳನ್ನು ತೆಗೆದಿಟ್ಟುಕೊಳ್ಳಬೇಕು. ಅಮೃತಬಳ್ಳಿ ಕಾಂಡ, ಬೇವಿನ ಕಡ್ಡಿ ಮತ್ತು ಶುಂಠಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಜಜ್ಜಿ ನೀರಿನಲ್ಲಿ ಕುದಿಸಬೇಕು. ವಾರಕ್ಕೊಮ್ಮೆ ಈ ಕಷಾಯ ಕುಡಿಯುತ್ತಿದ್ದಲ್ಲಿ ಡೆಂಗ್ಯು ಜ್ವರ ಕೂಡ ಹತ್ತಿರ ಸುಳಿಯುವುದಿಲ್ಲವಂತೆ.
ಡೆಂಗ್ಯೂ ಜ್ವರ ಬಂದಾಗ ನೆಗಡಿ, ಕೆಮ್ಮು ಇರದೆ ಮೈ ಕೈ ನೋವು, ಹೊಟ್ಟೆ ನೋವು, ಜ್ವರ, ತಲೆನೋವು ಬರುತ್ತದೆ. ಔಷಧ ತೆಗೆದುಕೊಂಡ ಮೇಲೆ ಜ್ವರ ಹೋಗಿ ಎರಡು ದಿನ ಬಿಟ್ಟು ಮೈಮೇಲೆ ಗುಳ್ಳೆ ಕಾಣಿಸಿಕೊಂಡು ಮೈ ಕೈ ನೋವು ಬಂದರೆ, ಹೊಟ್ಟೆ ನೋವು, ವಿಪರೀತವಾಗಿ ವಾಂತಿಯಾದರೆ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು.
ಡೆಂಗ್ಯೂ ಜ್ವರ ಯಕೃತ್ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಯಕೃತ್ ಮೇಲೆ ಪ್ರಭಾವ ಬೀರಿದರೆ ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಶ್ವಾಸಕೋಶದ ಮೇಲೆ ಪರಿಣಾಮ ಬೀರಿದರೆ ಉಸಿರಾಟದಲ್ಲಿ ಸಮಸ್ಯೆ ಉಂಟಾಗುತ್ತದೆ. ಡೆಂಗ್ಯು ಬರುವುದು ಟೈಗರ್ ಮಾಸ್ಕಿಟೋದಿಂದ, ಇದು ಹಗಲಿನಲ್ಲಿ ಕಚ್ಚುತ್ತದೆ ಎಂಬ ಅಂಶಗಳ ಬಗ್ಗೆ ಎಚ್ಚರ ವಹಿಸಬೇಕು ಎನ್ನುತ್ತಾರೆ ವೈದ್ಯರುಗಳು.