ಮೊಬೈಲ್ ನಲ್ಲಿ ಬಂದ ಮೆಸೇಜ್, ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದರೆ ಹಣ ದರೋಡೆ ಮಾಡುವ ಆನ್ ಲೈನ್ ದರೋಡೆ ನೋಡಿದ್ದೀರಿ, ಕೇಳಿದ್ದೀರಿ. ಈಗ ನಿಮ್ಮ ಮನೆಗೆ ಪೋಸ್ಟ್ ಮೂಲಕ ಬರುತ್ತೆ ವಂಚನೆಯ ಕಾರ್ಡ್!
ಹೌದು, ಪೋಸ್ಟ್ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರುವ ಬಹುಮಾನ ರೂಪದ ಕಾರ್ಡ್ ಗೀಚಿದರೆ ಅದರಲ್ಲಿ ನಮೂದಾಗಿರುವ ಹಣ, ಬಹುಮಾನ ನಿಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಗೀಚಿದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಮಾಯವಾಗುವುದು ಗ್ಯಾರಂಟಿ.
ಇಂತಹದ್ದೊಂದು ಹೊಸ ವಂಚನೆ ಜಾಲ ಬೆಳಕಿಗೆ ಬಂದಿದ್ದು, ರಾಜ್ಯದ ಹಲವೆಡೆ ಬಹುಮಾನದ ಆಸೆಗೆ ಗಿಫ್ಟ್ ಕಾರ್ಡ್ ಅಥವಾ ಸ್ಕ್ರ್ಯಾಚ್ ಕಾರ್ಡ್ ಗೀಚಿ ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ವಂಚಕರು ಪೋಸ್ಟ್ ಮುಖಾಂತರ ಮೀಶೋ, ಫ್ಲಿಪ್ಕಾರ್ಟ್ ಹಾಗೂ ಇತರೆ ಶಾಪಿಂಗ್ ಪ್ಲಾಟ್ಫಾರ್ಮ್ ಹೆಸರಿನಲ್ಲಿ ಸ್ಕ್ರ್ಯಾಚ್ ಕಾರ್ಡ್ ಕಳುಹಿಸುತ್ತಾರೆ. ಅದರ ಮೇಲೆ ನೀವು ಇಷ್ಟು ಮೊತ್ತದ ಬಹುಮಾನ ಗೆದ್ದಿದ್ದೀರಿ. ನಿಮ್ಮ ಮೊಬೈಲ್ ನಿಂದ ಕ್ಯೂ ಅಂಡ್ ಕೋರ್ ಸ್ಕ್ಯಾನ್ ಮಾಡಿದರೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಬರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನು ನಂಬಿದ ಜನ ಕ್ಯೂ ಅಂಡ್ ಕೋರ್ ಮಾಡುತ್ತಿದ್ದಂತೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕೂಡಲೇ ವಿತ್ ಡ್ರಾ ಮಾಡಿ ವಂಚಿಸಲಾಗುತ್ತಿದೆ. ಆದ್ದರಿಂದ ಮನೆಗೆ ಅಥವಾ ಯಾರೇ ನಿಮಗೆ ಸ್ಕ್ರ್ಯಾಚ್ ಕಾರ್ಡ್ ನೀಡಿದರೆ ಅದನ್ನು ಬಳಸುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ನಿಮ್ಮ ಮನೆಗೆ ಅಂತಹ ಪೋಸ್ಟ್ ಬಂದರೆ ಕೂಡಲೇ ಸ್ಥಳೀಯ ಪೊಲೀಸರ ಗಮನಕ್ಕೆ ತೆಗೆದುಕೊಂಡು ಬನ್ನಿ.