ಐದು ದಿನಗಳ ಅಂತರದಲ್ಲಿ 5 ಮಂದಿಗೆ ಹಾವು ಕಚ್ಚಿದ್ದು, ಮೂವರು ಮೃತಪಟ್ಟು ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾವಿನ ಕಾಟಕ್ಕೆ ಬೆಚ್ಚಿದ ಗ್ರಾಮಸ್ಥರು ಹಾವು ಹಿಡಿಯುವ ಪುಂಗಿ ಊದುವವರನ್ನು ಕರೆಸಿದ್ದಾರೆ.
ಹೌದು, ಇದು ನಂಬಲು ಅಸಾಧ್ಯವಾದರೂ ನಿಜ. ಏಕೆಂದರೆ ಇದು ಉತ್ತರ ಪ್ರದೇಶದ ಸಾದರ್ಪುರ್ ಗ್ರಾಮದಲ್ಲಿ ನಡೆದಿದ್ದು, ಹಾವು ಹಿಡಿಯಲು ಸ್ವತಃ ಪೊಲೀಸರೇ ಪುಂಗಿ ಊದುವವರನ್ನು ಕರೆಸಿದ್ದಾರೆ.
ಅಕ್ಟೋಬರ್ 20, ಭಾನುವಾರದಂದು ಮೊದಲ ಬಾರಿ ಹಾವು ಕಚ್ಚಿದ್ದು, ಮನೆಯಲ್ಲಿ ನೆಲದ ಮೇಲೆ ಮಲಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದು, ದಾರಿ ಮಧ್ಯದಲ್ಲೇ ಮೂವರು ಮೃತಪಟ್ಟಿದ್ದರು.
ಸೋಮವಾರ ರಾತ್ರಿ ಎದುರುಗಡೆ ಮನೆಯ ಮೇಲೆ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ರೀತಿ ಮಂಗಳವಾರ ಮತ್ತು ಬುಧವಾರ ಕೂಡ ಹಾವು ಕಚ್ಚಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮೀರತ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ಹಾವಿನ ಭಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಪುಂಗಿ ಊದಿ ಹಾವು ಹಿಡಿಯುವ ನಾಲ್ವರು ಸದಸ್ಯರ ತಂಡವನ್ನು ಕರೆಸಲಾಗಿದೆ. ತಂಡ ಎರಡು ಹಾವುಗಳನ್ನು ಹಿಡಿದಿದ್ದು, ಇನ್ನೂ ಕೆಲವು ಹಾವುಗಳು ಇರುವ ಸಾಧ್ಯತೆ ಇದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.