ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕದ ಖಾತೆ ತೆರೆದಿರುವ ಭಾರತ ಸೋಮವಾರದ ಪಂದ್ಯಗಳಲ್ಲಿ 5 ಪದಕ ಗಳಿಸುವ ಅವಕಾಶ ಹೊಂದಿದೆ. ಅದರಲ್ಲೂ ಕಂಚಿನ ಪದಕ ವಿಜೇತೆ ಶೂಟರ್ ಮನು ಭಾಕರ್ ಮತ್ತೆ ಅಖಾಡಕ್ಕೆ ಇಳಿಯುತ್ತಿರುವುದರಿಂದ ಎರಡನೇ ಪದಕದ ನಿರೀಕ್ಷೆಯಲ್ಲಿದ್ದಾರೆ.
ಸೋಮವಾರ ಭಾರತ ಹಲವಾರು ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದೆ. ಅದರಲ್ಲೂ 10ಮೀ. ಏರ್ ಪಿಸ್ತೂಲ್ ನಲ್ಲಿ ಕಂಚಿನ ಪದಕ ಗೆದ್ದು ಭಾರತ ತಂಡದಲ್ಲಿ ಉತ್ಸಾಹ ಮೂಡಿಸಿರುವ ಮನು ಭಾಕರ್ ಸೋಮವಾರ 10 ಮೀ. ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ.
10 ಮೀ. ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಸರ್ಬಜೊತ್ ಸಿಂಗ್ ಜೊತೆ ಸ್ಪರ್ಧಿಸಲಿದ್ದಾರೆ. ರಿಧಮ್ ಸಾಂಗ್ವಾನ್ ಮತ್ತು ಅರ್ಜುನ್ ಚೀಮಾ ಮಿಶ್ರ ಡಬಲ್ಸ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅರ್ಜುನ್ ಬಬುತಾ ಮತ್ತು ರಮಿತಾ ಜಿಂದಾಲ್ 10 ಮೀ. ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಎರಡು ಪದಕಗಳ ಭರವಸೆ ಮೂಡಿಸಿದ್ದಾರೆ.
ಆರ್ಚರಿ ವಿಭಾಗದಲ್ಲಿ ಮಹಿಳೆಯರು ಕ್ವಾರ್ಟರ್ ಫೈನಲ್ ಹಂತದಲ್ಲಿ ನಿರ್ಗಮಿಸಿದ್ದರಿಂದ ಪುರುಷರ ತಂಡ ವಿಭಾಗದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಧೀರಜ್ ಬೊಮ್ಮದೇವರ, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಸೋಮವಾರ ಟರ್ಕಿ ವಿರುದ್ಧ ಸ್ಪರ್ಧಿಸಲಿದ್ದು, ಇಲ್ಲಿ ಜಯ ಗಳಿಸಿದರೆ, ಪದಕದ ಸುತ್ತಿಗೆ ತೇರ್ಗಡೆ ಆಗಲಿದ್ದಾರೆ.