ಹಾಲಿ ಚಾಂಪಿಯನ್ ಭಾರತ ತಂಡ 3-1 ಗೋಲುಗಳಿಂದ ಕೊರಿಯಾ ತಂಡವನ್ನು ಬಗ್ಗುಬಡಿದು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಈ ಗೆಲುವಿನೊಂದಿಗೆ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಭರವಸೆ ಮೂಡಿಸಿದೆ.
ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಬಾರಿ ಕಂಚಿನ ಪದಕ ಗೆದ್ದು ದಾಖಲೆ ಬರೆದ ವಿಶ್ವಾಸದಲ್ಲಿರುವ ಭಾರತ ತಂಡ ಸೋಲರಿಯದ ತಂಡವಾಗಿ ಮುನ್ನುಗ್ಗುತ್ತಿದ್ದು, ಚೀನಾ ವಿರುದ್ಧ 3-0ಯಿಂದ, ಜಪಾನ್ ವಿರುದ್ಧ 5-0 ಮತ್ತು ಮಲೇಷ್ಯಾ ವಿರುದ್ಧ 8-1ರಿಂದ ಗೆಲುವು ದಾಖಲಿಸಿದೆ.
ಭಾರತದ ಪರ ನಾಯಕ ಹರ್ಮನ್ ಪ್ರೀತ್ ಸಿಂಗ್ 2 (9 ಮತ್ತು 43ನೇ ನಿಮಿಷ) ಗೋಲು ಬಾರಿಸಿ ಗೆಲುವಿನ ರೂವಾರಿಯಾದರು. ಅರ್ಜಿತ್ ಸಿಂಗ್ ಹಂಡಲ್ (8ನೇ ನಿಮಿಷ) ಒಂದು ಗೋಲು ಗಳಿಸಿದರು. ಕೊರಿಯಾ ಪರ ಜಿಯುನ್ ಯಾಂಗ್ (30ನೇ ನಿಮಿಷ) ಒಂದು ಗೋಲು ಬಾರಿಸಿ ಹೋರಾಟ ನಡೆಸಿದರೂ ಫಲ ನೀಡಲಿಲ್ಲ.