ಭಾರತ ತಂಡ 3-2 ಗೋಲುಗಳಿಂದ ಜಯಭೇರಿ ಬಾರಿಸಿ ಆಸ್ಟ್ರೇಲಿಯಾ ವಿರುದ್ಧ ಒಲಿಂಪಿಕ್ಸ್ ನಲ್ಲಿ 52 ವರ್ಷಗಳ ನಂತರ ಮೊದಲ ಬಾರಿ ಗೆಲುವಿನ ಚಾರಿತ್ರಿಕ ಸಾಧನೆ ಮಾಡಿದೆ.
ಶುಕ್ರವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಭಾರತ ತಂಡ ನಾಯಕ ಹರ್ಮನ್ ಪ್ರೀತ್ ಸಿಂಗ್ ಸಿಡಿಸಿದ 2 ಗೋಲುಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಅಮೋಘ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಒಲಿಂಪಿಕ್ಸ್ ನಲ್ಲಿ 52 ವರ್ಷಗಳ ನಂತರ ಗೆದ್ದ ದಾಖಲೆ ಬರೆಯಿತು. 1972ರ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಗೆಲುವು ದಾಖಲಿಸಿತ್ತು.
ಪ್ರಸಕ್ತ ವರ್ಷದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 8ನೇ ಬಾರಿ ಮುಖಾಮುಖಿ ಆಗಿದ್ದು, ಕಳೆದ 7 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿ ಪೂರ್ಣ ಮೇಲುಗೈ ಸಾಧಿಸಿತ್ತು. ಆದರೆ ಭಾರತ ಗೆಲುವು ದಾಖಲಿಸಿ ಸೋಲಿನ ಸರಪಳಿ ಕಾಯ್ದುಕೊಂಡಿದ್ದೂ ಅಲ್ಲದೇ ಗುಂಪಿನ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಭಾರತದ ಪರ ಅಭಿಷೇಕ್ ಪಂದ್ಯದ 12ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಕೇವಲ ಒಂದು ನಿಮಿಷದ ಅಂತರದಲ್ಲೇ ಹರ್ಮನ್ ಪ್ರೀತ್ ಗೋಲು ಬಾರಿಸಿ ಮುನ್ನಡೆಯನ್ನು ಹೆಚ್ಚಿಸಿದರು. ಹರ್ಮನ್ ಪ್ರೀತ್ ಮೂರನೇ ಕ್ವಾರ್ಟರ್ ಆಟದಲ್ಲಿ ಮತ್ತೊಂದು ಗೋಲು ಬಾರಿಸಿ ಮುನ್ನಡೆಯನ್ನು ಹೆಚ್ಚಿಸಿದರು.
ಈ ನಡುವೆ ಆಸ್ಟ್ರೇಲಿಯಾದ ಸತತ ದಾಳಿಯನ್ನು ಗೋಲ್ ಕೀಪರ್ ಶ್ರೀಜೇಶ್ ತಡೆಗಟ್ಟಿ ಭಾರತದ ಮುನ್ನಡೆ ಕಾಯ್ದುಕೊಂಡರು. ಆದರೆ ಬ್ಲಾಕ್ ಗೋವರ್ಸ್ ಎರಡು ಗೋಲು ಬಾರಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಲು ಪ್ರಯತ್ನಿಸಿದರು. ಇದರಿಂದ ಪಂದ್ಯ ಕೊನೆಯ ಹಂತದಲ್ಲಿ ಜಿದ್ದಾಜಿದ್ದಿನ ಹೋರಾಟದಿಂದ ರೋಚಕ ತಿರುವು ಪಡೆಯಿತು. ಆದರೆ ಭಾರತ ಮೂರನೇ ಗೋಲು ಬಿಟ್ಟುಕೊಡದೇ ಒಂದು ಗೋಲಿನ ಅಂತರದಿಂದ ಜಯ ಸಾಧಿಸಿತು.