ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಯವರೆಗೂ ಹೋರಾಟ ನಡೆಸಿದ 10 ಆಟಗಾರರ ಭಾರತದ ತಂಡ ಶೂಟೌಟ್ ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಭಾನುವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ನಿಗದಿತ ಅವಧಿಯ ಮುಕ್ತಾಯಗೊಂಡಾಗ ಭಾರತ ಮತ್ತು ಬ್ರಿಟನ್ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದವು. ಫಲಿತಾಂಶ ನಿರ್ಣಯಕ್ಕಾಗಿ ನಡೆದ ಶೂಟೌಟ್ ನಲ್ಲಿ ಭಾರತ 4-2ರಿಂದ ಜಯಭೇರಿ ಬಾರಿಸಿತು.
10 ಆಟಗಾರರೊಂದಿಗೆ ಕಣಕ್ಕಿಳಿದ ಭಾರತ ನಾಯಕ ಹರ್ಮನ್ ಪ್ರೀತ್ 10ನೇ ನಿಮಿಷದಲ್ಲಿ ಸಿಡಿಸಿದ ಗೋಲಿನಿಂದ ಮುನ್ನಡೆ ಪಡೆಯುವ ಮೂಲಕ ಬ್ರಿಟನ್ ಗೆ ಆಘಾತ ನೀಡಿತು. ಇದು ಟೂರ್ನಿಯಲ್ಲಿ ಭಾರತ ಗಳಿಸಿದ 7ನೇ ಗೋಲಾಗಿದೆ. ಭಾರತದ ಗೋಡೆ ಎಂದೇ ಖ್ಯಾತರಾಗಿರುವ ಹಾಗೂ ಕೊನೆಯ ಟೂರ್ನಿ ಆಡುತ್ತಿರುವ ಗೋಲ್ ಕೀಪರ್ ಶ್ರೀಜೇಶ್ ಶೂಟೌಟ್ ನಲ್ಲಿ 3 ಗೋಲು ತಡೆದು ಗೆಲುವಿನಲ್ಲ ಮಿಂಚಿದರು.
ಪಂದ್ಯದ ಕೊನೆಯ ಹಂತದಲ್ಲಿ ರುಬರ್ಟ್ ಶೆಪಾರ್ಲಿ ಗೋಲು ಬಾರಿಸಿ ಸಮಬಲ ಸಾಧಿಸಿದ್ದರಿಂದ ಪಂದ್ಯ ಶೂಟೌಟ್ ತಲುಪಿತು. ಶೂಟೌಟ್ ನಲ್ಲಿ ಬ್ರಿಟನ್ ಗೋಲ್ ಕೀಪರ್ ಮಾಡಿದ ಎಡವಟ್ಟಿನ ಲಾಭ ಪಡೆದ ಭಾರತ ರೋಚಕ ಜಯದೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದು, ಪದಕದ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಭಾರತ ಒಲಿಂಪಿಕ್ಸ್ ಇತಿಹಾಸದಲ್ಲೇ ಅತೀ ಹೆಚ್ಚು 12 ಪದಕ ಗೆದ್ದು ದಾಖಲೆ ಹೊಂದಿತ್ತು. ಆದರೆ ಇದೀಗ ಪದಕ ಗೆದ್ದ ದಶಕಗಳೇ ಕಳೆದಿದ್ದು, ಭಾರತ ಈ ಬಾರಿ ಚಿನ್ನದ ಪದಕ ಗೆದ್ದು ಬರ ನೀಗಿಸುವುದೇ ಎಂಬುದು ಕಾದು ನೋಡಬೇಕಾಗಿದೆ.
ಭಾರತ ಇದೀಗ ಸತತ ಎರಡನೇ ಬಾರಿ ಪದಕ ಗೆಲ್ಲುವ ಅವಕಾಶಕ್ಕೆ ಕೇವಲ ಒಂದು ಹೆಜ್ಜೆ ಬಾಕಿ ಇದೆ. ಸೆಮಿಫೈನಲ್ ನಲ್ಲಿ ಅರ್ಜೆಂಟೀನಾ ಮತ್ತು ಜರ್ಮನಿ ನಡುವಣ ಪಂದ್ಯ ವಿಜೇತರನ್ನು ಎದುರಿಸಲಿರುವ ಭಾರತ ಜಯ ಸಾಧಿಸಿದರೆ ಪದಕ ಖಚಿತಪಡಿಸಿಕೊಳ್ಳಲಿದೆ. ಭಾರತ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು.