ಪ್ರಯಾಣಿಕರ ಐಷಾರಾಮಿ ಹಡಗಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂವರು ಮೃತಪಟ್ಟಿದ್ದು, 130 ಮಂದಿ ನಾಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ಭಾನುವಾರ ಸಂಭವಿಸಿದೆ.
ಉತ್ತರ ಸುಲಾವೇಸಿಯಲ್ಲಿ ಭಾನುವಾರ ಮಧ್ಯಾಹ್ನ 280 ಪ್ರಯಾಣಿಕರಿದ್ದ ಹಡಗಿಗೆ ಬೆಂಕಿ ತಗುಲಿದೆ. ದುರಂತದಲ್ಲಿ 150 ಮಂದಿಯನ್ನು ರಕ್ಷಿಸಲಾಗಿದೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹಲವಾರು ಮಂದಿ ಜೀವ ರಕ್ಷಣೆಗೆ ನೀರಿಗೆ ಹಾರಿದ್ದಾರೆ ಎಂದು ಚೀನಾದ ಪತ್ರಿಕೆಗಳು ವರದಿ ಮಾಡಿವೆ.
ಕೆಎಂ ಬಾರ್ಸಿಲೋನಾ 5 ಎಂಬ ಹಡಗು, ಪ್ರಾಂತೀಯ ರಾಜಧಾನಿ ಮನಾಡೊ ಬಳಿ ಸಂಚರಿಸುತ್ತಿದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಕಿಗೆ ಆಹುತಿಯಾಗಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣೆ ಮತ್ತು ತಗ್ಗಿಸುವಿಕೆ ಸಂಸ್ಥೆಯ ತ್ವರಿತ ಪ್ರತಿಕ್ರಿಯೆ ತಂಡದ ಮುಖ್ಯಸ್ಥ ಡ್ಯಾನಿ ರೆಪಿ ಹೇಳಿದ್ದಾರೆ.
ದುರಂತದಲ್ಲಿ ಮೂವರು ಮೃತಪಟ್ಟಿದ್ದರು, ಸುಮಾರು 150 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಜಂಟಿ ರಕ್ಷಣಾ ತಂಡ ಮತ್ತು ಸ್ಥಳೀಯ ಮೀನುಗಾರರ ದೋಣಿಗಳು ಅವರನ್ನು ರಕ್ಷಿಸಿವೆ ಎಂದು ಪ್ರಾಂತೀಯ ಶೋಧ ಮತ್ತು ರಕ್ಷಣಾ ಕಚೇರಿಯ ಹಿರಿಯ ಅಧಿಕಾರಿ ವೆರಿ ಅರಿಯಂಟೊ ಕ್ಸಿನ್ಹುವಾಗೆ ತಿಳಿಸಿದರು.


