Thursday, December 25, 2025
Google search engine
Homeಅಪರಾಧಅಮೆರಿಕದಲ್ಲಿ ಪತ್ನಿ, ಮಗನ ಎದುರೇ ಕನ್ನಡಿಗನ ಶಿರಚ್ಛೇದ ಮಾಡಿ ಭೀಕರ ಹತ್ಯೆ!

ಅಮೆರಿಕದಲ್ಲಿ ಪತ್ನಿ, ಮಗನ ಎದುರೇ ಕನ್ನಡಿಗನ ಶಿರಚ್ಛೇದ ಮಾಡಿ ಭೀಕರ ಹತ್ಯೆ!

ವಾಷಿಂಗ್ ಮೆಷಿನ್ ವಿಚಾರಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಪತ್ನಿ ಹಾಗೂ ಮಗನ ಎದುರೇ ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದಗೊಳಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ಟೆಕ್ಸಾಸ್‌ನ ಡಲ್ಲಾಸ್‌ನ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಬುಧವಾರ ಬೆಳಿಗ್ಗೆ 50 ವರ್ಷದ ಕರ್ನಾಟಕ ಮೂಲದ ಹೋಟೆಲ್ ಮ್ಯಾನೇಜರ್ ಚಂದ್ರ ಮೌಳಿ ‘ಬಾಬ್’ ನಾಗಮಲ್ಲಯ್ಯ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಸಹೋದ್ಯೋಗಿ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್ ಈ ಕೃತ್ಯ ಎಸಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮುರಿದು ಹೋದ ವಾಷಿಂಗ್ ಮಷಿನ್ ವಿಚಾರವಾಗಿ ಆರೋಪಿ ಮತ್ತು ನಾಗಮಲ್ಲಯ್ಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಆರೋಪಿ, ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಡಲ್ಲಾಸ್ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಸೆರೆಯಾದ ದೃಶ್ಯಾವಳಿಗಳಲ್ಲಿ ಕೋಬೋಸ್-ಮಾರ್ಟಿನೆಜ್ ಮಚ್ಚು ಹೊರತೆಗೆದು ನಾಗಮಲ್ಲಯ್ಯನವರ ಮೇಲೆ ಸತತವಾಗಿ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ. ಗಾಯಗೊಂಡ ನಾಗಮಲ್ಲಯ್ಯ ಪತ್ನಿ ಮತ್ತು 18 ವರ್ಷದ ಪುತ್ರನಿದ್ದ ಮೋಟೆಲ್ ಕಚೇರಿಯತ್ತ ಓಡಿಹೋಗಿದ್ದಾರೆ. ಆದರೆ ಆರೋಪಿ ಅವರನ್ನು ಹಿಂಬಾಲಿಸಿ, ನಿರಂತರವಾಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಸ್ನೇಹಿತರು ಮತ್ತು ತಮ್ಮ ಕುಟುಂಬಕ್ಕೆ ನಾಗಮಲ್ಲಯ್ಯ ಬಾಬ್ ಎಂದೇ ಚಿರಪರಿಚಿತರು. ಓರ್ವ ಪ್ರೀತಿಯ ಪತಿ, ಜವಾಬ್ದಾರಿಯುತ ತಂದೆ ಮತ್ತು ಸ್ಫೂರ್ತಿಯ ವ್ಯಕ್ತಿತ್ವ ನಾಗಮಲ್ಲಯ್ಯ ಅವರದಾಗಿತ್ತು ಎಂದು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

“ಇಂಥ ಘಟನೆಯನ್ನು ಊಹಿಸಲು ಕೂಡಾ ಸಾಧ್ಯವಿಲ್ಲ. ಅತ್ಯಂತ ಆಘಾತಕಾರಿ. ಬಾಬ್ ಅವರನ್ನು ಅವರ ಪತ್ನಿ ಮತ್ತು ಮಗನ ಮುಂದೆಯೇ ಕ್ರೂರವಾಗಿ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಈ ಘಟನೆಯ ಸ್ವರೂಪ ನಮ್ಮ ಸಮುದಾಯವನ್ನು ಬೆಚ್ಚಿಬೀಳಿಸಿದೆ” ಎಂದು ಓರ್ವ ಸ್ನೇಹಿತರು ಕಳವಳ ವ್ಯಕ್ತಪಡಿಸಿದರು.

ಆರೋಪಿಯ ವಿರುದ್ಧ ಹೂಸ್ಟನ್‌ನಲ್ಲಿ ವಾಹನ ಕಳ್ಳತನ ಮತ್ತು ಹಲ್ಲೆ ಪ್ರಕರಣಗಳಿವೆ. ಇದೀಗ ಮತ್ತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಲೆ ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

ಅಂತ್ಯಕ್ರಿಯೆ, ತಕ್ಷಣದ ಜೀವನ ವೆಚ್ಚಗಳು ಮತ್ತು ಮಗನ ಕಾಲೇಜು ಶಿಕ್ಷಣಕ್ಕಾಗಿ ಸಮುದಾಯ ನಿಧಿ ಸಂಗ್ರಹಿಸಲು ಮುಂದಾಗಿದೆ. ನಾಗಮಲ್ಲಯ್ಯ ಅವರ ಮೃತದೇಹದ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments