ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ ಎಂಬ ಶಂಕೆಯ ಮೇಲೆ ಗಂಡ 2700 ಕಿ.ಮೀ. ದೂರದಿಂದ ಆಗಮಿಸಿ ಪತ್ನಿಯನ್ನು ಇರಿದು ಕೊಂದ ಘಟನೆ ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ ನಡೆದಿದೆ.
ಹೋಟೆಲ್ ಕೊಠಡಿಯಲ್ಲಿ ತಂಗಿದ್ದ ೨೫ ವರ್ಷದ ಅನಸ್ತೇಸಿಯಾಗೆ 15 ಬಾರಿ ಕುತ್ತಿಗೆಗೆ ಇರಿದು 41 ವರ್ಷದ ಗಂಡ ಅಲ್ಬರ್ಟ್ ಮೊರ್ಗನ್ ಕೊಲೆ ಮಾಡಿದ್ದಾನೆ.
ರಷ್ಯಾದಲ್ಲಿ ಕಾನೂನು ಸಲಹೆಗಾರನಾಗಿರುವ ಮಾರ್ಗನ್ ಮತ್ತು ಪೊಬೆಡಾ ವಿಮಾನ ಸಂಸ್ಥೆಯಲ್ಲಿ ಗಗನಸಖಿಯಾಗಿದ್ದ ಅನಸ್ತೇಸಿಯಾ ಮದುವೆ ಆಗಿ 2 ವರ್ಷ ಆಗಿತ್ತು. ವಿಚ್ಛೇದನ ಪಡೆದು ಬೇರೆ ಆಗಿದ್ದರೂ ಮಾರ್ಗನ್ ಆಕೆಯ ಮೊಬೈಲ್ ಸಂದೇಶಗಳನ್ನು ಹ್ಯಾಕ್ ಮಾಡಿ ಪರಿಶೀಲನೆ ನಡೆಸುತ್ತಿದ್ದ.
ಆಕೆಯ ಮೊಬೈಲ್ ಸಂದೇಶಗಳನ್ನು ಗಮನಿಸಿದ ಮಾರ್ಗನ್ ಆಕೆ ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡಿದ್ದಾಳೆ ಎಂದು ಮನಗಂಡ. ವಿಚ್ಛೇದನ ಪಡೆದಿದ್ದರೂ ಮದುವೆ ಇನ್ನೂ ಚಾಲ್ತಿಯಲ್ಲಿದೆ ಎಂದು ನಂಬಿದ್ದ ಮಾರ್ಗನ್ ಆಕೆಯನ್ನು ಕೊಲ್ಲಲು ರಷ್ಯಾದಿಂದ 2700 ಕಿ.ಮೀ. ಪ್ರಯಾಣಿಸಿ ಯುನೈಟಡ್ ಅರಬ್ ಎಮಿರೆಟ್ಸ್ ದೇಶದಲ್ಲಿರುವ ಪತ್ನಿಗೆ ಬುದ್ದಿ ಕಲಿಸಲು ನಿರ್ಧರಿಸಿದ.
ಹೋಟೆಲ್ ಅತಿಥಿ ಎಂದು ಹೇಳಿಕೊಂಡು ಬಂದ ಮಾರ್ಗನ್, ನಂತರ ಹೋಟೆಲ್ ಸಿಬ್ಬಂದಿಯ ಸಮವಸ್ತ್ರ ಧರಿಸಿ ಆಕೆಯ ಕೋಣೆಗೆ ಹೋಗಿದ್ದ. ಪತ್ನಿ ತಂಗಿದ್ದ ಹೋಟೆಲ್ ಕೊಠಡಿಗೆ ಹೋಗಿ ಹಸಿರು ಬಣ್ಣವನ್ನು ಆಕೆಗೆ ಬಳಿದು ಕೂದಲು ಕತ್ತರಿಸುವ ಮೂಲಕ ಆಕೆಗೆ ಬುದ್ದಿ ಕಲಿಸಲು ಬಯಸಿದ್ದ. ಆದರೆ ಕೊಠಡಿಗೆ ಹೋದ ಮೇಲೆ ಮಾತಿಗೆ ಮಾತು ಬೆಳೆದು ಆಕೆಯನ್ನು ಕೂದಲು ಕತ್ತರಿಸಲು ತಂದಿದ್ದ ಚಾಕುವಿನಿಂದ ಕುತ್ತಿಗೆಗೆ 15 ಬಾರಿ ಇರಿದು ಕೊಂದಿದ್ದಾನೆ.
ಮಾರ್ಗನ್ ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ೭ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ನಂತರ ಅನಸ್ತೇಸಿಯಾಳನ್ನು ವಿವಾಹವಾಗಿದ್ದ. ದಂಪತಿ ನಡುವೆ ಸಣ್ಣಪುಟ್ಟ ವಿಷಯಕ್ಕೆ ಗಲಾಟೆ ನಡೆಯುತ್ತಿದ್ದು, ಅನಸ್ತೇಸಿಯಾ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ನಂತರ ಎಲ್ಲಾ ದೂರುಗಳನ್ನು ವಾಪಸ್ ಪಡೆದಿದ್ದಳು. ಇದೀಗ ಕೊಲೆ ಪ್ರಕರಣ ತಿಳಿಯುತ್ತಿದ್ದಂತೆ ಯುಎಇಗೆ ಆಗಮಿಸಿದ ರಷ್ಯಾ ಭದ್ರತಾಪಡೆಗಳು ಮಾರ್ಗನ್ ನನ್ನು ಬಂಧಿಸಿದ್ದಾರೆ.


