ಪ್ರಯಾಣಿಕರು ತುಂಬಿದ್ದ ಲಾರಿ ನದಿಗೆ ಬಿದ್ದ ಪರಿಣಾಮ 71 ಮಂದಿ ಮೃತಪಟ್ಟ ದಾರುಣ ಘಟನೆ ಇಥಿಯೋಪಿಯಾದಲ್ಲಿ ಸಂಭವಿಸಿದೆ.
ಸೆಡಿಮಾ ವಲಯದ ಬೊನಾ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟ 71 ಮಂದಿಯಲ್ಲಿ 68 ಪುರುಷರು ಹಾಗೂ ಮೂವರು ಮಹಿಳೆಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಗ್ಗುದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿ ರಕ್ಷಣಾ ಗೋಡೆ ಇಲ್ಲದ ಸೇತುವೆ ಮೇಲಿಂದ ನದಿಗೆ ಬಿದ್ದಿದೆ. ಘಟನೆಯಲ್ಲಿ ಲಾರಿ ಹಾಗೂ ಕಾರು ಅಪ್ಪಚ್ಚಿ ಆಗಿವೆ.
ಕೆಲವು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದರೆ ಇನ್ನು ಕೆಲವರು ಕೆಲಸ ಸೇರಿದಂತೆ ನಾನಾ ಕಡೆಗಳಿಂದ ಮನೆಗೆ ಮರಳಲು ಲಾರಿ ಹತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇಥಿಯೋಪಿಯಾದಲ್ಲಿ ಕೆಟ್ಟ ರಸ್ತೆಯಿಂದಾಗಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗಿವೆ. 2018ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಹುತೇಕ ವಿದ್ಯಾರ್ಥಿಗಳೇ ಸೇರಿದ 38 ಮಂದಿ ಅಸುನೀಗಿದ್ದರು.