ಕೆಎಲ್ ರಾಹುಲ್, ರಿಷಭ್ ಪಂತ್ ಸೇರಿದಂತೆ ಪ್ರಮುಖ 577 ಆಟಗಾರರು ನಾಳೆಯಿಂದ ಅಬುಧಾಬಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಅಬುಧಾಬಿಯ ಜೆಡಾಹ್ ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದ್ದು, 10 ಫ್ರಾಂಚೈಸಿಗಳು ಸೇರಿ 204 ಕ್ರಿಕೆಟಿಗರನ್ನು ಆಯ್ಕೆ ಆಗಲಿದ್ದು, ಇದರಲ್ಲಿ 70 ವಿದೇಶೀ ಆಟಗಾರರು ಸರದಿಯಲ್ಲಿದ್ದಾರೆ.
ಈಗಾಗಲೇ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಆದರೆ ಪ್ರಮುಖ ಆಟಗಾರರ ಕೊರತೆ ಎಲ್ಲಾ ತಂಡಗಳು ಎದುರಿಸುತ್ತಿವೆ. ಅಲ್ಲದೇ ಈ ಬಾರಿ ಬಿಸಿಸಿಐ ಆಟಗಾರರ ಖರೀದಿಗೆ ಮೀಸಲು ಮೊತ್ತದಲ್ಲಿ ಹೆಚ್ಚಳ ಮಾಡಿರುವುದರಿಂದ ಆಟಗಾರರು ನಿರೀಕ್ಷೆಗೂ ಮೀರಿದ ಮೊತ್ತ ಪಡೆಯುವ ನಿರೀಕ್ಷೆ ಇದೆ.
ಸ್ವದೇಶೀ ಆಟಗಾರರ ಖರೀದಿಗೆ ಮಿತಿ ನಿಗದಿ ಪಡಿಸದೇ ಇರುವ ಬಿಸಿಸಿಐ ವಿದೇಶೀ ಆಟಗಾರರಿಗೆ ಗರಿಷ್ಠ 18 ಕೋಟಿ ಬಿಡ್ ಮಾಡಬಹುದು ಎಂದು ಷರತ್ತು ವಿಧಿಸಿದೆ. ಇದರಿಂದ ವಿದೇಶೀ ಆಟಗಾರರ ಮೇಲೆ ಫ್ರಾಂಚೈಸಿಗಳು ಗಮನ ಕೇಂದ್ರೀಕರಿಸುವುದು ತಪ್ಪಲಿದೆ.
ಆಟಗಾರರು ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ. ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇರುವುದರಿಂದ ಉಳಿದ ಸುಮಾರು 19ರಿಂದ 20 ಖರೀದಿಸಲು ಅವಕಾಶವಿದೆ. ಫ್ರಾಂಚೈಸಿಗಳಿಗೆ ಖರೀದಿಸಲು ಗರಿಷ್ಠ 120 ಕೋಟಿ ರೂ. ಹಣ ಇದೆ.
ಈ ಬಾರಿಯ ಹರಾಜಿನ ಪ್ರಮುಖ ಆಕರ್ಷಣೆ ಆಗಿರುವುದು ಸ್ವದೇಶೀ ಆಟಗಾರರಾದ ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್ ಇದ್ದರೆ ವಿದೇಶೀ ಆಟಗಾರರ ಪಟ್ಟಿಯಲ್ಲಿ ಜೋಸ್ ಬಟ್ಲರ್, ಜೇಮ್ಸ್ ಆಂಡರ್ಸನ್, ಡೇವಿಡ್ ವಾರ್ನರ್, ಕಾಗಿಸೊ ರಬಡಾ, ಗ್ಲೆನ್ ಮ್ಯಾಕ್ಸ್ ವೆಲ್, ಫಾಫ್ ಡು ಪ್ಲೆಸಿಸ್, ಟ್ರೆಂಟ್ ಬೌಲ್ಟ್ ಇದ್ದಾರೆ. ಇವರ ಮೂಲಧನ 2 ಕೋಟಿ ರೂ. ನಿಗದಿಪಡಿಸಲಾಗಿದೆ.