ಕಾಂಗ್ರೆಸ್ ಸಂಸದ ಶಶಿ ತರೂರ್ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜೈ ಸಂವಿಧಾನ ಎಂದು ಘೋಷಣೆ ಕೂಗಿದ್ದಕ್ಕೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗಿದೆ.
ಗುರುವಾರ ಶಶಿ ತರೂರ್ ಲೋಕಸಭಾ ಸಂಸದರಾಗಿ ಸಂವಿಧಾನ ಕೈಪಿಡಿ ಹಿಡಿದು ಆಂಗ್ಲ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಜೈ ಹಿಂದ್ ಜೈ ಸಂವಿಧಾನ್ ಎಂದು ಘೋಷಣೆ ಕೂಗಿದರು. ನಂತರ ಸ್ಪೀಕರ್ ಗೆ ಕೈ ಕುಲುಕಿದರು.
ಶಶಿ ತರೂರ್ ತಮ್ಮ ಆಸನದತ್ತ ಹಿಂತಿರುಗುತ್ತಿದ್ದಾಗ ಸ್ಪೀಕರ್ ಓಂಪ್ರಕಾಶ್ ಬಿರ್ಲಾ, ನೀವು ಈಗ ಕೇವಲ ಸಂವಿಧಾನದ ಹೆಸರಿನಲ್ಲಿ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದೀರಿ ಎಂದು ಹೇಳಿದರು.
ಗ್ಯಾಲರಿಯಲ್ಲಿ ಕುಳಿತಿದ್ದ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಸ್ಪೀಕರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಜೈ ಸಂವಿಧಾನ್ ಎಂದು ಕರೆದರೆ ನಿಮಗೆ ಏನು ಸಮಸ್ಯೆ? ಸಂವಿಧಾನ ಹೆಸರು ಹೇಳಿದರೆ ನೀವು ಆಕ್ಷೇಪಿಸುವಂತಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸಂಸದನ ಆಕ್ಷೇಪಕ್ಕೆ ಅಸಮಾಧನಗೊಂಡ ಸ್ಪೀಕರ್, ನಾನು ಯಾವುದನ್ನು ವಿರೋಧಿಸಬೇಕು, ಯಾವುದನ್ನು ಅಲ್ಲ ಎಂಬ ಬಗ್ಗೆ ನಿಮ್ಮ ಸಲಹೆ ನನಗೆ ಬೇಕಾಗಿಲ್ಲ. ನೀವು ಸುಮ್ಮನೆ ಕುಳಿತುಕೊಳ್ಳಿ ಎಂದು ಗದರಿಸಿದರು.
ಸ್ಪೀಕರ್ ಗೆ ಸಂವಿಧಾನ ಎಂದು ಹೆಸರು ಹೇಳಿದರೆ ಸಿಟ್ಟು ಬರುತ್ತದೆ. ಸಂಸತ್ ಒಳಗೆ ಜೈ ಸಂವಿಧಾನ್ ಎಂದು ಘೋಷಣೆ ಕೂಗ ಬಾರದೇ? ಬಿಜೆಪಿ ನಾಯಕೆರು ಅಸಂವಿಧಾನಿಕ ಭಾಷೆ ಮತ್ತು ಘೋಷಣೆ ಕೂಗುತ್ತಿದ್ದರೂ ಸುಮ್ಮನೆ ಕುಳಿತಿರುವ ಸ್ಪೀಕರ್ ಗೆ ಸಂವಿಧಾನ ಶಬ್ಧವೇ ಆಗುವುದಿಲ್ಲವೇ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.
ಸಂವಿಧಾನದ ಪ್ರಕಾರವೇ ಸಂಸತ್ ನಡೆಯುತ್ತಿರುವುದು. ಆದರೆ ಸಂಸತ್ ನಲ್ಲಿಯೇ ಸಂವಿಧಾನ ಘೋಷಣೆ ಕೂಗುವುದು ಅಪರಾಧವೇ? ಸಂವಿಧಾನದ ಮೇಲೆಯೇ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿರುವ ಸ್ಪೀಕರ್ ಇಷ್ಟು ದುರ್ನಡತೆ ತೋರುತ್ತಾರೆ ಎಂದು ಊಹಿಸುದು ಕಷ್ಟ ಎಂದು ಪ್ರಿಯಾಂಕಾ ಹೇಳಿದರು.