ಬೆಂಗಳೂರು: ಕಳೆದ ಐದೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 2.13 ಲಕ್ಷ ಅಪಫಾತಗಳು ಸಂಭವಿಸಿ 60,115 ಮಂದಿ ಮೃತಪಟ್ಟಿದ್ದು, ಪ್ರತಿದಿನ ಸರಾಸರಿ 130ರಿಂದ 150 ಅಪಘಾತಗಳು ನಡೆದು ಸರಾಸರಿ 36ರಿಂದ 40 ಮಂದಿ ಬಲಿಯಾಗುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೇಲ್ಮನೆಗೆ ಬುಧವಾರ ತಿಳಿಸಿದ್ದಾರೆ.
ಅಪಘಾತ ತಡೆಗಟ್ಟಲು ಹಲವು ಯೋಜನೆಗಳು, ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ, ಆದರೂ ಅಪಘಾತ ಕಡಿಮೆಯಾಗುತ್ತಿಲ್ಲ, ಯುವಕರು,ಮಧ್ಯ ವಯಸ್ಕರು ಹೆಚ್ಚು ಬಲಿಯಾಗುತ್ತಿದ್ದು,ಸಾರ್ವಜನಿಕರಲ್ಲಿ ಜಾಗೃತಿ ಉಂಟಾಗದಿದ್ದರೆ ಅಪಘಾತ ಕಡಿಮೆಯಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, 2021ರಿಂದ ಕಳೆದ ಜೂನ್ ಅಂತ್ಯದವರೆಗೂ 2,13,192 ಅಪಘಾತಗಳು ಸಂಭವಿಸಿವೆ. ಅವುಗಳಲ್ಲಿ 60,115 ಮಂದಿ ವಾಹನ ಸವಾರರು ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರ ಪೈಕಿ ಬಹುತೇಕ ಯುವಕರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರತಿದಿನ 10 ಸಾವಿರ ಹಾಗೂ ದೇಶದಲ್ಲಿ 1 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಹಲವು ರೀತಿಯ ಕಾನೂನು ಕ್ರಮಗಳು ಹಾಗೂ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಅಪಘಾತಗಳು ಸಂಭವಿಸುತ್ತಲೇ ಇವೆ. ಕುಡಿದು ವಾಹನ ಚಾಲನೆ, ಬೈಕ್ ವ್ಹೀಲಿಂಗ್, ಹೆಲ್ಮೆಟ್ ಧರಿಸದಿರುವುದು, ಅಲ್ಲದೇ ಅರ್ಧ ಹೆಲ್ಮೆಟ್ ಹಾಕುವುದು ಹಾಗೂ ಅಜಾಗರೂಕ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಆದರೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ.10ರಷ್ಟು ಅಪಘಾತಗಳ ಪ್ರಮಾಣ ಇಳಿಕೆಯಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 1.31 ಕೋಟಿ ದ್ವಿಚಕ್ರ ವಾಹನಗಳಿಗೆ 1.23 ಕೋಟಿ ನಾಲ್ಕು ಚಕ್ರದ ವಾಹನಗಳಿಗೆ ಪರವಾನಗಿ (ಡಿಎಲ್) ನೀಡಲಾಗಿದೆ. 2,89,977 ಲಕ್ಷ ಹಳದಿ ಬೋರ್ಡ್ ಕಾರುಗಳು ನೋಂದಾಯಿಸಿಕೊಂಡಿವೆ ಎಂದು ಸಚಿವರು ಮಾಹಿತಿ ನೀಡಿದರು.
ಸರಾಸರಿ 40 ಮಂದಿ ಸಾವು:
ದ್ವಿಚಕ್ರ ವಾಹನ ಅಪಘಾತಗಳ ಪೈಕಿ ಬೆಂಗಳೂರು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಸರ್ಕಾರ ನೀಡಿದ ಮಾಹಿತಿಯಂತೆ ಪ್ರತಿದಿನ 136 ಅಪಘಾತಗಳು ಸಂಭವಿಸಿದ್ದು ಸರಾಸರಿ 36 ರಿಂದ 40 ಮಂದಿ ಮೃತಪಟ್ಟಿದ್ದಾರೆ. ಅಪಘಾತ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಇಲಾಖೆ ವತಿಯಿಂದ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಹೆಲ್ಮೆಟ್ ಧರಿಸದೆ ಸಾವನ್ನಪ್ಪಿದವರ ಸಂಖ್ಯೆ ಅಧಿಕವಾಗಿದೆ. ಪೊಲೀಸರು ಹಿಡಿಯುತ್ತಾರೆ ಎಂಬ ಕಾರಣಕ್ಕಾಗಿ ಕಾಟಾಚಾರಕ್ಕೆ ಹಾಫ್ ಹೆಲ್ಮೆಟ್ ಧರಿಸುತ್ತಾರೆ. ವ್ಹೀಲಿಂಗ್ ಮಾಡಿ ಯುವಕರು ಸಾಯುತ್ತಿದ್ದಾರೆ. ಅಪಘಾತ ನಿಯಂತ್ರಿಸಲು ಸೂಕ್ತ ಕಡೆಗಳಲ್ಲಿ ಕ್ಯಾಮರಗಳನ್ನು ಅಳವಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.


