ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕುರಿತು ಎಸ್ ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ 3923 ಪುಟಗಳ ಎಫ್ ಐಆರ್ ವರದಿ ಸಲ್ಲಿಸಿದ್ದು, ಷಡ್ಯಂತ್ರ ರೂಪಿಸಿದ 6 ಮಂದಿಯ ವಿರುದ್ಧ ದೋಷಾರೋಪ ಮಾಡಿದೆ.
ಕಳೆದ ನವೆಂಬರ್ 21ರಂದು ಎಸ್ಐಟಿ ವರದಿ ಸಲ್ಲಿಸಿದ್ದು, ಒಟ್ಟು 6 ಜನರ ವಿರುದ್ಧ ಷಡ್ಯಂತ್ರ ಆರೋಪ ಮಾಡಲಾಗಿದೆ. ಹಣದ ಆಮಿಷದಿಂದ ಮಾಸ್ಕ್ ಮ್ಯಾನ್ ಚಿನ್ನಯ್ಯ ಸುಳ್ಳು ದೂರು ನೀಡಿದ್ದಾರೆ ಎನ್ನಲಾಗಿದ್ದು, ಬುರುಡೆಯನ್ನು ಹಿಡಿದುಕೊಂಡು ಧರ್ಮಸ್ಥಳದ ವಿರುದ್ಧ ಪಿತೂರಿ ಮಾಡಲು ಸಂಚು ರೂಪಿಸಿದ್ದರು ಎಂದು ಎಫ್ ಐಆರ್ ನಲ್ಲಿ ತಿಳಿಸಿದೆ.
ಧರ್ಮಸ್ಥಳ ಗ್ರಾಮದ ಕಾಡಿನಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿ ಏನೇನಿದೆ?
ಮಾಸ್ಕ್ ಮ್ಯಾನ್ ಚಿನ್ನಯ್ಯ (Chinnayya), ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಹಾಗೂ ಸುಜಾತಾ ಭಟ್ ಅಪರಾಧ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಪ್ರಕರಣದ ಮೊದಲ ಆರೋಪಿಯಾಗಿರುವ ದೂರುದಾರ ಚಿನ್ನಯ್ಯ ಆಮಿಷಕ್ಕೆ ಒಳಗಾಗಿ ಸುಳ್ಳು ಹೇಳಿದ್ದಾನೆ. ಹಣವನ್ನು ಪಡೆದು ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಅಪರಿಚಿತ ಶವ ಹೂತಿದ್ದೇನೆಂದು ಸುಳ್ಳು ಹೇಳಿಸಿ ಆರೋಪಿಗಳು ವಿಡಿಯೋ ರೆಕಾರ್ಡ್ ಮಾಡಿದ್ದರು.
ಎಸ್‌ಐಟಿ ಮೌನಕ್ಕೆ ಕಾರಣವೇನು ?
ವಿಠಲ ಗೌಡನಿಗೆ ಚಿನ್ನಯ್ಯ ಮೊದಲಿನಿಂದಲೂ ಪರಿಚಯ ಹೊಂದಿದ್ದ. ಈ ಪರಿಚಯದ ಆಧಾರದ ಮೇಲೆ ಮಹೇಶ್ ತಿಮರೋಡಿ ಮನೆಗೆ ಚಿನ್ನಯ್ಯನನ್ನು ವಿಠ್ಠಲ ಗೌಡ ಕರೆದುಕೊಂಡು ಹೋಗಿ ಒಳಸಂಚು ನಡೆಸಲಾಗಿದೆ. ಈ ಸಂಚಿನ ಸಭೆಯಲ್ಲಿ ಗಿರೀಶ್ ಮಟ್ಟಣ್ಣನವರ್, ಜಯಂತ್, ವಿಠ್ಠಲ ಗೌಡ ಭಾಗಿಯಾಗಿ ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿಗೆ ಪ್ಲ್ಯಾನ್ ಮಾಡಲಾಯಿತು.
ಈ ಪ್ಲ್ಯಾನ್ ಪ್ರಕಾರ ನೂರಾರು ಶವ ಹೂತಿರುವುದಾಗಿ ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಸಲಾಗಿತ್ತು. ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನಂತರ ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು. ಧರ್ಮಸ್ಥಳದ ಮೇಲ್ವಿಚಾರಕರ ವಿರುದ್ಧ ಚಿನ್ನಯ್ಯ ಸುಳ್ಳು ಹೇಳಿದ್ದಾನೆ. ತಲೆ ಬುರುಡೆಯೊಂದನ್ನು ತಂದು ತಾನೇ ಹೂತಿದ್ದ ತಲೆ ಬುರುಡೆ ಎಂದು ಅಸತ್ಯ ನುಡಿದಿದ್ದಾನೆ. ಹಣದ ಆಮಿಷ ಹಾಗೂ ಬೆದರಿಕೆಗೆ ಒಳಪಟ್ಟು ಅಪರಿಚಿತ ಶವ ಅದರಲ್ಲೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಶವಗಳನ್ನು ಹೂತಿರೋದಾಗಿ ಸುಳ್ಳು ಹೇಳಿದ್ದಾನೆ.
ಸುಳ್ಳು ದೂರು ನೀಡಿದ್ದು ಅಲ್ಲದೇ ನ್ಯಾಯಾಧೀಶರ ಮುಂದೆಯೂ ಕಥೆ ಕಟ್ಟಿದ್ದಾನೆ. ಚಿನ್ನಯ್ಯ ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಕಾರಣಕ್ಕೆ ಚಿನ್ನಯ್ಯನ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನಕ್ಕೊಳಪಡಿಸಲಾಗಿದೆ.


