Thursday, December 25, 2025
Google search engine
Homeರಾಜ್ಯಬೆಳಗಾವಿಯ ಗ್ರಾಮ ಪಂಚಾಯಿತಿಯ ಎಲ್ಲಾ 28 ಸದಸ್ಯರ ವಜಾ: 6 ವರ್ಷ ಚುನಾವಣಾ ನಿಷೇಧ!

ಬೆಳಗಾವಿಯ ಗ್ರಾಮ ಪಂಚಾಯಿತಿಯ ಎಲ್ಲಾ 28 ಸದಸ್ಯರ ವಜಾ: 6 ವರ್ಷ ಚುನಾವಣಾ ನಿಷೇಧ!

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯಿತಿಯ ಎಲ್ಲಾ 28 ಸದಸ್ಯರನ್ನು ವಜಾಗೊಳಿಸಿರುವ ರಾಜ್ಯ ಸರ್ಕಾರ 6 ವರ್ಷಗಳ ಕಾಲ ಚುನಾವಣೆಗಳಿಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿದೆ.

ಅಕ್ರಮ ಆಸ್ತಿ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಶಿಂಧಿಕುರಬೇಟ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಒಟ್ಟು 28 ಸದಸ್ಯರನ್ನು ಏಕಕಾಲಕ್ಕೆ ವಜಾಗೊಳಿಸಿದೆ. ಅಲ್ಲದೇ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣವು 2022ರ ಫೆಬ್ರವರಿ 25 ಮತ್ತು ಮಾರ್ಚ್ 25ರಂದು ನಡೆದ ಸಾಮಾನ್ಯ ಸಭೆಗಳೊಂದಿಗೆ ಸಂಬಂಧಿಸಿದೆ. ಈ ಸಭೆಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸಹಭಾಗಿತ್ವದಲ್ಲಿ, ಗ್ರಾಮದ ಆಸ್ತಿ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ನಿರ್ದಿಷ್ಟವಾಗಿ, ಶಾಂತಾ ನಾಗಪ್ಪ ಪೋತದಾರ ಅವರ ಹೆಸರಿನ ಆಸ್ತಿಯನ್ನು ರಾಮಚಂದ್ರ ದಾನಪ್ಪ ಪೋತದಾರ ಅವರಿಗೆ ಕಾನೂನುಬಾಹಿರವಾಗಿ ವರ್ಗಾಯಿಸಲಾಗಿದೆ ಎಂದು ತನಿಖೆಯಿಂದ ದೃಢಪಟ್ಟಿದೆ.

ವಜಾಗೊಂಡವರ ಪಟ್ಟಿ

ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಅಧ್ಯಕ್ಷೆ ರೆಣುಕಾ ಈರಪ್ಪಾ ಪಾಟೀಲ, ಉಪಾಧ್ಯಕ್ಷ ಭೀಮಪ್ಪಾ ಯಲ್ಲಪ್ಪಾ ಬರನಾಳಿ ಹಾಗೂ ಕೆಳಕಂಡ 26 ಮಂದಿ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ:

ಫಕೀರಪ್ಪಾ ಭೋವಿ, ಗಜಾನನ ಪಾಟೀಲ, ಶಾಂತವ್ವ ಕೌಜಲಗಿ, ಮಾರುತಿ ಜಾಧವ, ಅಮೃತ ಕಾಳ್ಯಾಗೋಳ, ರುಕ್ಸಾರ ಜಮಾದಾರ, ರೂಪಾ ಕಂಬಾರ, ಶಾಂತಮ್ಮ ಭೋವಿ, ಸುರೇಖಾ ಪತ್ತಾರ, ಇಬ್ರಾಹಿಮ ಮುಲ್ಲಾ, ಚಾಂದಬಿ ಸೌದಾಗರ, ರಾಮಪ್ಪ ಬೆಳಗಲಿ, ಶಮಶಾದ ಸೌದಾಗರ, ಮಂಜುಳಾ ಕರೋಶಿ, ಮಂಜುನಾಥ ಗುಡಕ್ಷೇತ್ರ, ರಾಮಕೃಷ್ಣ ಗಾಡಿವಡ್ಡರ, ಸುಮಿತ್ರಾ ಮಾಯ, ಪಾರ್ವತಿ ಜೊತೆನ್ನವರ, ಅಡಿವೆಪ್ಪಾ ಬೆಕ್ಕಿನ್ನವರ, ಸಿದ್ದಪ್ಪ ಕಟ್ಟಿಕಾರ, ಬಸಲಿಂಗಪ್ಪ ಭಜಂತ್ರಿ, ಲಕ್ಷ್ಮೀಬಾಯಿ ಸೂರ್ಯವಂಶ, ನಿಸ್ಸಾರಹ್ಮದ ಜಕಾತಿ, ಅಶೋಕ ಮೇತ್ರಿ, ಸುರೇಖಾ ಗಾಡಿವಡ್ಡರ, ಶ್ರೀಕಾಂತ ಕಾಳ್ಯಾಗೋಳ.

ಕಾನೂನು ಕ್ರಮ ಮತ್ತು ಮುಂದಿನ ನಡೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಕಲಂ 48(4) ಮತ್ತು 48(5) ಅಡಿಯಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷರ ವಿರುದ್ಧ ಹಾಗೂ ಕಲಂ 43(ಎ)(2) ಅಡಿಯಲ್ಲಿ ಎಲ್ಲಾ 28 ಸದಸ್ಯರ ವಿರುದ್ಧ ಕ್ರಮ ಜರುಗಿಸಲಾಗಿದೆ. ಈ ತೀರ್ಮಾನದಿಂದ ಶಿಂಧಿಕುರಬೇಟ ಗ್ರಾಮ ಪಂಚಾಯಿತಿಯ ಆಡಳಿತವು ಸಂಪೂರ್ಣ ಶೂನ್ಯ ಸ್ಥಿತಿಗೆ ತಲುಪಿದ್ದು, ಪಂಚಾಯಿತಿಯ ಮುಂದಿನ ಆಡಳಿತ ಹೇಗಿರಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಸರ್ಕಾರದ ಈ ಕಠಿಣ ಕ್ರಮ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದು ಗಟ್ಟಿ ಹೆಜ್ಜೆಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments