ಬೆಂಗಳೂರು: ಬರೋಬರಿ 10 ವರ್ಷಗಳ ಬಳಿಕ ರಾಜ್ಯದಲ್ಲಿ ಬಸ್ ಪ್ರಯಾಣದರವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದು ಜ.5 ರ ಭಾನುವಾರದಿಂದಲೇ ಹೆಚ್ಚಳವಾಗಿರುವ ಶೇ.15 ರಷ್ಟು ಟಿಕೆಟ್ ದರ ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ ಪ್ರಯಾಣದರವನ್ನು ಶೇ 15 ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಸೇರಿ ನಾಲ್ಕು ನಿಗಮಗಳ ಪ್ರಯಾಣ ದರವನ್ನು ಶೇ.15ರಷ್ಟು ದರ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ .
ಜನವರಿ 5ರಿಂದ ಹೊಸ ದರ ಪರಿಷ್ಕರಣೆ ಅನ್ವಯವಾಗಲಿದೆ. ಎಲ್ಲಾ ಶ್ರೇಣಿಯ ಬಸ್ಗಳಿಗೆ ಸಮಾನವಾಗಿ 15%ರಷ್ಟು ದರ ಪರಿಷ್ಕರಣೆ ಆಗಲಿದೆ ಸಭೆಯ ಬಳಿಕ ಸುದ್ದಿಗಾರರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಈ ಹಿಂದೆ 2015ರಲ್ಲಿ ಬಸ್ ಪ್ರಯಾಣದರ ದರ ಪರಿಷ್ಕರಣೆಯಾಗಿತ್ತು. ನಾಲ್ಕು ರಸ್ತೆ ಸಾರಿಗೆ ನಿಗಮಗಳ ಡೀಸೆಲ್ ವೆಚ್ಚ 2015ರಲ್ಲಿ ನಿತ್ಯ 9.14 ಕೋಟಿ ರೂ. ಇತ್ತು, ಈಗ ಅದು 13.21 ಕೋಟಿ ರೂ.ಗೆ ಹೆಚ್ಚಳವಾಗಿದೆ. ಸಿಬ್ಬಂದಿ ವೆಚ್ಚವೂ ನಿತ್ಯ 12.85 ಕೋಟಿಯಿಂದ ಪ್ರಸ್ತುತ 18.36 ಕೋಟಿ ರೂ.ಗೆ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ರಸ್ತೆ ಸಾರಿಗೆ ನಿಗಮಗಳಿಗೆ ನಿತ್ಯ 9.56 ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದೆ. ಅದನ್ನು ಸರಿದೂಗಿಸಲು ದರ ಪರಿಷ್ಕರಣೆ ಮಾಡಲಾಗುತ್ತಿದೆ. ಪರಿಷ್ಕರಣೆ ಮಾಡುವುದರಿಂದ ಪ್ರತಿ ತಿಂಗಳು 74.85 ಕೋಟಿ ರೂ. ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗೆ 5,015 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಶಕ್ತಿ ಯೋಜನೆಗೆ ಪ್ರತಿ ತಿಂಗಳು 417.92 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಶಕ್ತಿ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಆಗುವುದಿಲ್ಲ ಎಂದು ಹೆಚ್.ಕೆ.ಪಾಟೀಲ್ ಹೇಳಿದರು.
ಡೀಸೆಲ್ ದರ ಹೆಚ್ಚಳ:
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಡೀಸೆಲ್ ದರ ಹೆಚ್ಚಳದಿಂದ ಖರ್ಚು ವೆಚ್ಚವೂ ಹೆಚ್ಚಾಗಿದೆ. ಸಿಬ್ಬಂದಿ ವೆಚ್ಚ ಕೂಡ ಶೇ.18ರಷ್ಟು ಏರಿಕೆಯಾಗಿದೆ. ಕಳೆದ 5-10 ವರ್ಷಗಳಿಂದ ಟಿಕೆಟ್ ದರ ಹೆಚ್ಚಿಸಿಲ್ಲ. ಸಂಬಳ ಮತ್ತು ಸಾರಿಗೆ ಸಂಸ್ಥೆ ಉಳಿಯಬೇಕಾಗಿರುವುದರಿಂದ ಪ್ರಯಾಣ ದರ ಪರಿಷ್ಕರಣೆ ಅನಿರ್ವಾಯವಾಗಿತ್ತು ಎಂದು ಹೇಳಿದರು.
ಆದರೆ ಶಕ್ತಿ ಯೋಜನೆಯಿಂದ ನಮಗೆ ಲಾಭ ಆಗಿದೆ. ಬಿಜೆಪಿ ಸರ್ಕಾರ ಸಾವಿರಾರು ಕೋಟಿ ರೂ. ಸಾಲ ಬಿಟ್ಟು ಹೋಗಿದೆ. ನಮ್ಮ ಸರ್ಕಾರದಲ್ಲಿ ವೇತನಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ನಮ್ಮ ಸರ್ಕಾರದಲ್ಲಿ ಟೈಂ ಸರಿಯಾಗಿ ಸಂಬಳ ಆಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಸಂಬಳದ ಸಮಸ್ಯೆಯಾಗಿತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಸ್ ಟಿಕೆಟ್ ದರ ಕಡಿಮೆ ಇದೆ ಎಂದಿದ್ದಾರೆ.
ಸಾಲದ ಜವಾಬ್ದಾರಿ:
ಹಿಂದನ ಸರ್ಕಾರದ ಸಾಲ ತೀರಿರುವ ಜವಾಬ್ದಾರಿ ಕೂಡ ಇದೆ. ಹತ್ತಿರ ಹತ್ತಿರ ಒಂದು ಸಾವಿರ ಕೋಟಿ ರೂ. ಆದಾಯ ಹೆಚ್ಚಾಗಿದೆ. ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಹೊಸ ವರ್ಷಕ್ಕೆ ಯಾವುದೇ ತೊಂದರೆಯಾಗಲ್ಲ. ಮುಂದೆಯೂ ಮಾಡಬೇಕಿತ್ತು ಅಲ್ಲ, ಹೀಗಾಗಿ ಈಗ ಮಾಡಿದ್ದೇವೆ. ಅದರಲ್ಲಿ ಹೊಸ ವರ್ಷ ಅಂತೇನಿಲ್ಲ. ಮಹಿಳೆಯರಿಗೆ ಉಚಿತ ಆದರೆ ಪುರುಷರಿಗೆ ತೊಂಂದರೆ ಆಗುತ್ತದೆ ಎಂಬ ಪ್ರಶ್ನೆಗೆ, ಬಸ್ ಓಡಿಸಬೇಕೋ ಬೇಡವೋ ಎಲ್ಲವನ್ನೂ ನೋಡಬೇಕಾಗಿದೆ ಎಂದು ಹೇಳಿದ್ದಾರೆ.
2 ಸಾವಿರ ಕೋಟಿಗೆ ಅಸ್ತು:
ಸಚಿವ ಸಂಪುಟ ಸಭೆಯಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಭವಿಷ್ಯ ನಿಧಿ ಬಾಕಿ ಹಾಗೂ ಇಂಧನ ಬಾಕಿ ಹೊಣೆಗಾರಿಕೆ ಪಾವತಿಸಲು ಒಟ್ಟು 2000 ಕೋಟಿ ರೂ.ಗಳನ್ನು ಸರ್ಕಾರದ ಖಾತರಿ/ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಕಳೆದ ಡಿ. 31 ರಂದು ಹೊರಡಿಸಿರುವ ಸರ್ಕಾರಿ ಆದೇಶಕ್ಕೆ ಅನುಮೋದನೆ ನೀಡಲಾಯಿತು.