ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಬುಧವಾರ 13ರ ಬದಲು 11ಎ ಸ್ಥಳದಲ್ಲಿ ಶೋಧಕಾರ್ಯ ನಡೆಸಿದೆ.
ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯ ಸಮೀಪದಲ್ಲಿ ಎಸ್ ಐಟಿ ಶೋಧ ಕಾರ್ಯ 8ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ 13 ಹಾಗೂ ಕೊನೆಯ ಪಾಯಿಂಟ್ ಬದಲು 14ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಸಿದೆ.
ಬಂಗ್ಲೆಗುಡದಲ್ಲಿ ಈ ಹಿಂದೆ ದಿಢೀರನೆ ನಡೆಸಿದ ಶೋಧಕಾರ್ಯದ ವೇಳೆ ಪತ್ತೆಯಾದ ಅಸ್ಥಿಪಂಜರದ 140 ಮೂಳೆ ತುಂಡುಗಳ ಜಾಗವನ್ನು 14ನೇ ಪಾಯಿಂಟ್ ಎಂದು ಗುರುತಿಸಲಾಗಿದ್ದು, ಇದಕ್ಕೆ 11ಎ ಪಾಯಿಂಟ್ ಎಂದು ಎಸ್ ಐಟಿ ಗುರುತಿಸಿದೆ.
11ಎ ಪಾಯಿಂಟ್ ನಲ್ಲಿ ಶೋಧ ಕಾರ್ಯ ಆರಂಭಗೊಂಡಿದ್ದು, ಡಿಜಿಪಿ ಅನುಚೇತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ಶೋಧ ಕಾರ್ಯ ಪೂರ್ಣಗೊಳಿಸಿದ ನಂತರ 13ನೇ ಪಾಯಿಂಟ್ ನಲ್ಲಿ ಶೋಧ ನಡೆಸಲು ಎಸ್ ಐಟಿ ತೀರ್ಮಾನಿಸಲಾಗಿದೆ.
ತಲೆಬುರುಡೆ ಮಹಿಳೆಯದ್ದಲ್ಲ!
ಮಹಿಳೆಯ ತಲೆಬುರುಡೆ ಎಂದು ದೂರುದಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡುವಾಗ ನೀಡಿದ ತಲೆಬುರುಡೆ ಮಹಿಳೆಯದ್ದಲ್ಲ, ಪುರುಷನದ್ದು ಎಂದು ವಿಧಿ ವಿಜ್ಞಾನ ವರದಿ ಹೇಳಿದೆ.
ದೂರುದಾರ ಹೇಳಿಕೆಗೂ ವಾಸ್ತವಕ್ಕೂ ಅಜಗಜಾಂತರ ವ್ಯಾತ್ಯಾಸ ಇರುವುದರಿಂದ ತಲೆಬುರುಡೆಯನ್ನು ಮರುಪರಿಶೀಲನೆಗೆ ಎಸ್ ಐಟಿ ವಶಕ್ಕೆ ನೀಡಲಾಗಿದೆ.
15 ವರ್ಷಗಳ ದಾಖಲೆ ವಶ
ಇದೇ ವೇಳೆ ಕಳೆದ 15 ವರ್ಷಗಳಿಂದ ಧರ್ಮಸ್ಥಳದಲ್ಲಿ ನಾಪತ್ತೆಯಾದ ಮಹಿಳೆಯರು ಹಾಗೂ ಯುವತಿಯರ ದಾಖಲೆಗಳನ್ನು ನಾಶ ಪಡಿಸಲಾಗಿದೆ ಎಂಬ ಆರ್ ಟಿಐ ಕಾರ್ಯಕರ್ತ ಜಯಂತ್ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಎಸ್ ಐಟಿ, ದಾಖಲೆಗಳ ಸಂಗ್ರಹ ಕಾರ್ಯ ಆರಂಭಿಸಿದೆ.
ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿದ ಎಸ್ ಐಟಿ ಇನ್ ಸ್ಪೆಕ್ಟರ್ ಸಂಪತ್ 1995ರಿಂದ 2014ರವರೆಗೆ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳ ವಿವರಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.


