ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆಗೆ ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, 1 ಟನ್ ಶ್ರೀಗಂಧ ಮರದ ತುಂಡುಗಳನ್ನು ಬಳಸಲಾಗುತ್ತಿದೆ.
ಮಂಗಳವಾರ ಮುಂಜಾನೆ ಉಸಿರಾಟದ ಸಮಸ್ಯೆಯಿಂದ ನಿಧನರಾದ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯ ಸಂಸ್ಕಾರ ಒಕ್ಕಲಿಗ ಸಂಪ್ರದಾಯದ ಪ್ರಕಾರ ನೆರವೇರಲಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕಾಫಿ ಡೇ ಹತ್ತಿರದ ಖಾಲಿ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರ ಹಾಗೂ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ.
ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ವೈದಿಕರ ತಂಡದಿಂದ ವಿಧಿ-ವಿಧಾನ ಕಾರ್ಯಗಳು ನಡೆಯಲಿವೆ. ಹಲವು ಯತಿಗಳು, ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಕೃಷ್ಣ ಅವರ ಅಂತ್ಯಕ್ರಿಯೆ ಜರುಗಲಿದೆ.
ಸ್ಥಳೀಯ ಶಾಸಕ ಗಣಿಗ ರವಿ, ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರೈತರಿಗೆ ಗಂಧದ ಮರಗಳನ್ನು ಬೆಳೆಯಲು ಅನುವು ಮಾಡಿಕೊಟ್ಟಿದ್ದರು. ಇದರ ನೆನಪಾರ್ಥ ಬರೋಬ್ಬರಿ 1,000 ಕೆ.ಜಿ ಗಂಧದ ಕಟ್ಟಿಗೆ ಬಳಸಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಂತ್ಯಕ್ರಿಯೆ ನಡೆಸಲು ಪಾರ್ಥಿವ ಶರೀರವನ್ನು ಮದ್ದೂರಿನ ಸೋಮನಹಳ್ಳಿಗೆ ಕರೆತರಲಾಗಿದ್ದು, ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆದಿವೆ.
ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಸೋಮನಹಳ್ಳಿಗೆ ಕರೆದೊಯ್ಯುವ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.
ಅಂತಿಮ ಸಂಸ್ಕಾರಕ್ಕೆ ಮದ್ದೂರಿಗೆ ಕೊಂಡೊಯ್ಯುವ ಮುನ್ನ ಸದಾಶಿವನಗರ ನಿವಾಸದಲ್ಲಿ ಪತ್ನಿ ಪ್ರೇಮಾ ಕೃಷ್ಣ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕುಟುಂಬ ಸದಸ್ಯರು ಆದಿ ಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.
ಬೆಂಗಳೂರಿನಿಂದ ಬೆಳಿಗ್ಗೆ ಹೊರಟ ವಾಹನ ಮಧ್ಯಾಹ್ನ ೧೨.೩೦ರ ಸುಮಾರಿಗೆ ಸೋಮನಹಳ್ಳಿಗೆ ತಲುಪಿದ್ದು, ಸಂಜೆ ೫ ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಒಕ್ಕಲಿಗ ಸಮುದಾಯದ ಪ್ರಕಾರ ಅಂತ್ಯ ಸಂಸ್ಕಾರ ಪ್ರಕ್ರಿಯೆಗಳು ಆರಂಭವಾಗಲಿವೆ


