2024ನೇ ಸಾಲಿನಲ್ಲಿ ಭಾರತೀಯರು ಅತೀ ಹೆಚ್ಚು ಗೂಗಲ್ ನಲ್ಲಿ ಏನೆಲ್ಲಾ ಸರ್ಚ್ ಮಾಡಿದ್ದಾರೆ ಎಂಬ ವಿವರಗಳನ್ನು ಬಿಡಗಡೆ ಮಾಡಲಾಗಿದೆ.
ಗೂಗಲ್ ಸಂಸ್ಥೆ 2024ನೇ ಸಾಲಿನಲ್ಲಿ ಭಾರತೀಯರು ಅತೀ ಹೆಚ್ಚು ಹುಡುಕಾಟ ನಡೆಸಿದ ವಿಷಯಗಳ ಪಟ್ಟಿ ಬಿಡುಗಡೆ ಮಾಡಿದೆ. ಐಪಿಎಲ್, ಸಂಬಂಧಗಳ ಹುಡುಕಾಟ, ಸ್ತ್ರೀ-2 ಸಿನಿಮಾ, ಹೀಗೆ ಹತ್ತಾರು ವಿಷಯಗಳನ್ನು ಹೆಚ್ಚಾಗಿ ಹುಡುಕಿದ್ದಾರೆ. ಇದರಲ್ಲಿ ಪ್ರಮುಖವಾದ ವಿಷಯಗಳು ಯಾವುವು ಎಂಬ ಸ್ವಾರಸ್ಯಕರ ವಿಷಯವನ್ನು ಬಿಡುಗಡೆ ಮಾಡಿದೆ.
ಸಿನಿಮಾ
ಭಾರತೀಯರು ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಿದ ಸಿನಿಮಾ ಅಂದರೆ ಸ್ತ್ರೀ-2. ಅತ್ಯಂತ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರ ದಾಖಲೆಗಳನ್ನು ಬರೆದಿತ್ತು. ಸ್ತ್ರೀ-2 ಚಿತ್ರ ಮೊದಲ ಸಾಲಿನಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಹನುಮಾನ್, ಕಲ್ಕಿ, 12 ಫೇಲ್ ಮತ್ತು ಲಾಪಥ ಲೇಡಿಸ್ ಚಿತ್ರಗಳು ಸ್ಥಾನ ಪಡೆದಿವೆ.
ರಾಜಕೀಯ, ವಾಯುಮಾಲಿನ್ಯ
ಈ ಬಾರಿ ಲೋಕಸಭಾ ಚುನಾವಣೆ ಅಲ್ಲದೇ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ, ಉಪ ಚುನಾವಣೆಗಳು ನಡೆದಿದ್ದರಿಂದ ರಾಜಕೀಯ ವಿಷಯಗಳು ಹಾಗೂ ದೆಹಲಿ ಸೇರಿದಂತೆ ದೇಶದ ನಾನಾ ಕಡೆ ಕಾಡಿದ ವಾಯುಮಾಲಿನ್ಯ ವಿಷಯಗಳು ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆಗಿವೆ.
ಕ್ರೀಡೆ
ಕ್ರೀಡಾ ವಿಷಯದಲ್ಲಿ ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ಕ್ರಿಕೆಟ್ ಅನ್ನು ಹೆಚ್ಚು ಜನರು ಹುಡುಕಾಟ ನಡೆಸಿದ್ದಾರೆ. ಐಪಿಎಲ್, ಭಾರತ- ಇಂಗ್ಲೆಂಡ್ ಸರಣಿ, ಭಾರತ- ಬಾಂಗ್ಲಾದೇಶ ಸರಣಿ, ಪ್ರೊ.ಕಬಡ್ಡಿ ಹೆಚ್ಚು ಹುಡುಕಾಟ ನಡೆಸಲಾಗಿದೆ. ಜಾಗತಿಕ ಮಟ್ಟದಲ್ಲಿ ಒಲಿಂಪಿಕ್ಸ್, ಟಿ-20 ವಿಶ್ವಕಪ್, ಕೋಪಾ ಅಮೆರಿಕ ಹೆಚ್ಚು ಹುಡುಕಾಡಲಾಗಿದೆ. ಕ್ರೀಡಾಪಟುಗಳ ಪೈಕಿ ವಿನೇಶ್ ಪೊಗಟ್, ಹಾರ್ದಿಕ್ ಪಾಂಡ್ಯ ಕುರಿತು ಚರ್ಚೆಗಳು ಆಗಿವೆ.
ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದ್ದ ಕುಸ್ತಿಪಟು ವಿನೇಶ್ ಪೊಗಟ್ ಅನರ್ಹಗೊಂಡು ಚಿನ್ನದ ಪದಕ ಕಳೆದುಕೊಂಡರೆ, ನಂತರ ಕ್ರೀಡೆಗೆ ವಿದಾಯ ಹೇಳಿ ರಾಜಕೀಯ ಪ್ರವೇಶಿಸಿದ್ದೂ ಅಲ್ಲದೇ ಗೆದ್ದು ಶಾಸಕರಾಗಿ ಆಯ್ಕೆಯಾದರು. ಹಾರ್ದಿಕ್ ಪಾಂಡ್ಯ ವಿಚ್ಛೇದನ ವಿವಾದ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಿಷಯಗಳಿಂದ ಹೆಚ್ಚು ಚರ್ಚೆಗೊಳಗಾಗಿದ್ದರು.