ಕುಸಿದು ಕಂಗಾಲಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅನುಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ಸಮಯೋಚಿತ ಜೊತೆಯಾಟದ ನೆರವಿನಿಂದ ಐಪಿಎಲ್ 2024 ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಗೆ 174 ರನ್ ಗುರಿ ಒಡ್ಡಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು.
ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್ ಗೆ 41 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ಆದರೆ ಮುಸ್ತಫಿಸುರ್ ದಾಳಿಗೆ ತತ್ತರಿಸಿ ಒಂದು ಹಂತದಲ್ಲಿ ಆರ್ ಸಿಬಿ ತಂಡ 1 ರನ್ ಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ಕೊಹ್ಲಿ 20 ಎಸೆತಗಳಲ್ಲಿ 1 ಸಿಕ್ಸರ್ ಸಹಾಯದಿಂದ 21 ರನ್ ಗಳಿಸಿದರೆ, ಫಾಫ್ ಡು ಪ್ಲೆಸಿಸ್ 23 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 35 ರನ್ ಗಳಿಸಿ ಔಟಾದರು. ನಂತರ ಬಂದ ರಜತ್ ಪಟಿದಾರ್ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆನ್ ಖಾತೆ ತೆರೆಯುವ ಮುನ್ನವೇ ಔಟಾಗಿದ್ದರಿಂದ ಆರ್ ಸಿಬಿ 78 ರನ್ ಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಈ ಮಧ್ಯದಲ್ಲಿ ಕೆಮರೂನ್ ಗ್ರೀನ್ 18 ರನ್ ಗಳಿಸಿದರು.
ಈ ಹಂತದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್ 6ನೇ ವಿಕೆಟ್ ಗೆ 95 ರನ್ ಜೊತೆಯಾಟದಿಂದ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಅನುಜ್ ರಾವತ್ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 48 ರನ್ ಬಾರಿಸಿ ಕೊನೆಯ ಎಸೆತದಲ್ಲಿ ಇಲ್ಲದ ರನ್ ಕದಿಯುವ ಆತುರದಲ್ಲಿ ರನೌಟಾದರು. ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 38 ರನ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮುಸ್ತುಫಿಕರ್ ರಹೀಂ 4 ಓವರ್ ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದರು. ದೀಪಕ್ ಚಾಹರ್ 1 ವಿಕೆಟ್ ಗಳಿಸಿದರು.