ಕೋಲ್ಕತಾ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾಗಿದ್ದ ತರಬೇತಿ ಹಂತದಲ್ಲಿದ್ದ ವೈದ್ಯೆಯ ಮರಣೋತ್ತರ ಪರೀಕ್ಷಾ ವರದಿ ಬಿಡುಗಡೆ ಮಾಡಲಾಗಿದೆ.
ಕೋಲ್ಕತಾ ವೈದ್ಯೆಯ ಹತ್ಯೆ ಖಂಡಿಸಿ ಭಾನುವಾರ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದರು. ಕೋಲ್ಕತಾ ಪೊಲೀಸರು ಒಂದು ಕಡೆ ತನಿಖೆ ನಡೆಸುತ್ತಿದ್ದರೆ ಮತ್ತೊಂದೆಡೆ ಸಿಬಿಐ ಕೂಡ ತನಿಖೆ ಆರಂಭಿಸಿದೆ. ಪ್ರಕರಣದಲ್ಲಿ ಈಗಾಗಲೇ ವೈದ್ಯನನ್ನು ಬಂಧಿಸಲಾಗಿದೆ.
ಸೋಮವಾರ ಬಿಡುಗಡೆ ಮಾಡಲಾದ ವೈದ್ಯೆಯ ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಅತ್ಯಾಚಾರ ನಡೆದಿರುವ ಸಾಧ್ಯತೆ ಇದ್ದು, ಬಲವಂತವಾಗಿ ಆಕೆಯ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.
ಮರಣೋತ್ತರ ಪರೀಕ್ಷೆಯ ವಿವರ
ವೈದ್ಯೆಯ ತಲೆ, ಮುಖ, ಕುತ್ತಿಗೆ, ಗುಪ್ತಾಂಗ ಮತ್ತು ಕೈಗಳ ಮೇಲೆ 14 ಗಾಯಗಳು ಉಂಟಾಗಿವೆ. ಯಾವುದರ ವಿರುದ್ಧವೋ ಹೋರಾಟ ನಡೆಸುವಾಗ ಮೃತಪಟ್ಟಿರುವ ಸಾಧ್ಯತೆ ಇದೆ. ಆತ್ಮಹತ್ಯೆಯಿಂದ ಸಾವು ಸಂಭವಿಸಿಲ್ಲ.
ವೈದ್ಯೆಯ ಗುಪ್ತಾಂಗದಲ್ಲಿ ಗಟ್ಟಿಯಾದ ದ್ರವ ರೂಪದ ವಸ್ತು ಪತ್ತೆಯಾಗಿದ್ದು, ಇದು ಏನು ಎಂಬ ಬಗ್ಗೆ ಪರಿಶೀಲನೆ ನಡೆಯಬೇಕಿದೆ.
ಗಂಟಲು ಮತ್ತು ರಕ್ತದ ಸಂಚಾರಕ್ಕೆ ಅಡ್ಡಿಯುಂಟಾಗಿದ್ದರಿಂದ ಸಾವು ಸಂಭವಿಸಿದೆ. ವೈದ್ಯೆಯ ಯಾವುದೇ ಮೂಳೆ ಮುರಿತವಾಗಿಲ್ಲ.
ರಕ್ತದ ಮಾದರಿ ಹಾಗೂ ದೇಹದಲ್ಲಿ ಪತ್ತೆಯಾದ ದ್ರವ ರೂಪದ ವಸ್ತು ಮುಂತಾದವುಗಳನ್ನು ಹೆಚ್ಚುವರಿ ಪರಿಶೀಲನೆಗೆ ಲ್ಯಾಬೋರೇಟರಿಗೆ ಕಳುಹಿಸಿಕೊಡಲಾಗಿದೆ.