ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಶಿವಮೊಗ್ಗದಲ್ಲಿ ಶುಕ್ರವಾರ ಬೆಂಬಲಿಗರ ಸಭೆ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಕಣಕ್ಕಿಳಿಯುತ್ತಿದ್ದೇನೆ. ಗೆದ್ದ ಮೇಲೆ ಮತ್ತೆ ಬಿಜೆಪಿಗೆ ಸೇರ್ಪಡೆ ಆಗುತ್ತೇನೆ ಎಂದರು.
ಯಡಿಯೂರಪ್ಪನವರು ತಮಗೆ ಬೇಕಾದವರಿಗೆ ಟಿಕೆಟ್ ನೀಡಿದ್ದಾರೆ. ಅವರಿಗೆ ಬೇಕಾದವರು ಸೋತರೆ ಅದಕ್ಕೆ ಅವರೇ ಹೊಣೆ. ಹೈಕಮಾಂಡ್ ನೀಡಿದ ಅಧಿಕಾರವನ್ನು ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಎಲ್ಲಾ ಕಡೆ ಓಡಾಡಿದ್ದಾರೆ. ಪಕ್ಷ ಸಂಘಟನೆ ಮಾಡಿದ್ದಾರೆ. ನಾನು ಸಿ.ಟಿ.ರವಿ ಜೊತೆ ನಿನಗೆ ಸ್ಪರ್ಧೆ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದ್ದೆ. ಶೋಭ ಕರಂದ್ಲಾಜೆ ನಿಲ್ಲದಿದ್ದರೆ ನಿಲ್ಲುತ್ತೇನೆ ಎಂದಿದ್ದರು. ಶೋಭ ಅವರಿಗೆ ಸಿಗಲಿಲ್ಲ ಆದರೆ ಬೇರೆಯವರಿಗೆ ಕೊಟ್ಟರು ಎಂದು ಅವರು ವಿವರಿಸಿದರು.
ಹಿಂದುತ್ವದ ಪರ ಮಾತನಾಡುವ ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನಂದಗೌಡ ಅವರಿಗೆ ಟಿಕೆಟ್ ತಪ್ಪಿಸಿದರು. ಹಠ ಹಿಡಿದು ತನಗೆ ಏನುಬೇಕೋ ಅದೇ ಮಾಡುವಾಗ ಹಿರಿಯರು ಒಪ್ಪಿಗೆ ಕೊಟ್ಟರು. ಯಡಿಯೂರಪ್ಪ ಹಿರಿಯ ನಾಯಕ ಎಂದು ಕೇಂದ್ರದ ನಾಯಕರು ಅವರ ಮಾತು ಕೇಳಿದರು ಎಂದು ಸಿಟ್ಟು ಹೊರ ಹಾಕಿದರು.
ಬೊಮ್ಮಾಯಿ ಅವರು ನನಗೆ ಆರೋಗ್ಯ ಸರಿ ಇಲ್ಲ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಕೆಲವರು ಬೊಮ್ಮಾಯಿ ಅವರನ್ನು ನಂಬಬೇಡಿ ಎಂದು ಹೇಳಿದರು. ಕೇಂದ್ರ ಸಮಿತಿಗೆ ಬೊಮ್ಮಾಯಿ, ಕಾಂತೇಶ್, ಶೆಟ್ಟರ್ ಹೆಸರು ಹೋಯ್ತು. ಬೊಮ್ಮಾಯಿ ಅವರೇ ಬೇಡ ಅಂದ ಮೇಲೆ ಅವರ ಹೆಸರು ಹೇಗೆ ಹೋಯ್ತು ಎಂದು ಪ್ರಶ್ನಿಸಿದರು.