ಜಮ್ಮು ಕಾಶ್ಮೀರದಲ್ಲಿ 2024ರಲ್ಲಿ ಹತ್ಯೆ ಮಾಡಲಾದ ಉಗ್ರರಲ್ಲಿ ಶೇ.60ರಷ್ಟು ಪಾಕಿಸ್ತಾನಿಯರಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಸೋಮವಾರ ಶ್ರೀನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ನೆಲೆಸಿರುವ ಉಗ್ರರಲ್ಲಿ ಶೇ.80ರಷ್ಟು ಮಂದಿ ಪಾಕಿಸ್ತಾನಿಯರಾಗಿದ್ದಾರೆ ಎಂದರು.
2021 ಫೆಬ್ರವರಿಯಿಂದ ಗುಂಡಿನ ಚಕಮಕಿಯನ್ನು ಹತ್ತಿಕ್ಕಲು ಆಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪಾಕಿಸ್ತಾನ ಮತ್ತು ಚೀನಾ ಗಡಿಗಳಿಂದ ಭಾರತದೊಳಗೆ ನುಸುಳುವ ಪ್ರಯತ್ನಗಳಿಗೆ ಕಡಿವಾಣ ಹಾಕಲಾಗಿದೆ. ಮಾನವ ಸಾಗಾಣೆ ಮಾತ್ರವಲ್ಲ, ಡ್ರಗ್ಸ್, ಡ್ರೋಣ್, ಶಸ್ತ್ರಾಸ್ತ್ರ ಸಾಗಾಣೆ ನಿಯಂತ್ರಿಸಲಾಗಿದೆ ಎಂದು ಅವರು ನುಡಿದರು.
ಈ ಬಾರಿಯ ಅಮರನಾಥ ಯಾತ್ರೆ ವೇಳೆ 5 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು. ಅಲ್ಲದೇ ಲೋಕಸಭಾ ಮತ್ತು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯನ್ನು ಕೂಡ ಶಾಂತಿಯುತವಾಗಿ ನಡೆಸಿರುವುದು ಸಕರಾತ್ಮಕ ಬೆಳವಣಿಗೆ ಆಗಿದೆ ಎಂದು ಅವರು ಹೇಳಿದರು.