ಹೊಟ್ಟೆಯಲ್ಲಿದ್ದ ಬ್ಯಾಟರಿ, ಬ್ಲೇಡ್ ಸೇರಿದಂತೆ 56 ವಸ್ತುಗಳನ್ನು ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಂತರ 15 ವರ್ಷದ ಬಾಲಕ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹತ್ರಾಸ್ ಮೂಲದ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಶರ್ಮ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರಗೆ ತೆಗೆದ ನಂತರ ಮೃತಪಟ್ಟಿದ್ದಾನೆ.
ಹತ್ರಾಸ್ ನಲ್ಲಿ ಮೆಡಿಕಲ್ ರೆಪ್ರೆಸೆಂಟಿಟಿವ್ ಆಗಿರುವ ಸಂಚಿತ್ ಶರ್ಮ ಅವರ ಪುತ್ರ ಹೊಟ್ಟೆ ನೋವು ಎಂದು ನರಳುತ್ತಿದ್ದಾಗ ಆಸ್ಪತ್ರೆಗೆ ಸೇರಿಸಿದಾಗ ಬ್ಯಾಟರಿ, ಬ್ಲೇಡ್, ಹಲವು ವಿದೇಶಿ ಕಬ್ಬಿಣದ ವಸ್ತುಗಳು ಪತ್ತೆಯಾಗಿವೆ.
ಶಸ್ತ್ರಚಿಕಿತ್ಸೆ ಮಾರನೇ ದಿನ ಬಾಲಕ ರಕ್ತದೊತ್ತಡದಲ್ಲಿ ಇಳಿಕೆ ಕಂಡು ಬಂದಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ.
ಬಾಲಕ ಹೊಟ್ಟೆ ನೋವು ಹಾಗೂ ಉಸಿರಾಡಲು ಸಮಸ್ಯೆ ಆಗುತ್ತಿದೆ ಎಂದು ಹೇಳಿದ ನಂತರ ದೆಹಲಿ, ಜೈಪುರ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ನಾನಾ ಕಡೆ ಎಕ್ಸ್ ರೇ ಮಾಡಿಸಿದಾಗ ಹಲವಾರು ರೀತಿಯ ವಸ್ತುಗಳು ಪತ್ತೆಯಾಗಿವೆ.
ಆರಂಭದಲ್ಲಿ ಪೋಷಕರು ಹತ್ರಾಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ಸಾಮಾನ್ಯ ಚಿಕಿತ್ಸೆ ನೀಡಿ ಕೆಲವು ದಿನ ಇರಿಸಿಕೊಂಡು ಕಳುಹಿಸಿದ್ದಾರೆ. ಅಲ್ಲದೇ ಒಂದೊಂದು ಬಾರಿ ಎಕ್ಸ್ ರೇ ಮಾಡಿದಾಗ ಒಂದೊಂದು ರೀತಿಯ ವಸ್ತುಗಳು ಕಂಡು ಬಂದಿದ್ದರಿಂದ ಗೊಂದಲಕ್ಕೆ ಒಳಗಾಗಿದ್ದಾರೆ. ಇದರಿಂದ ಬಾಲಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಅಕ್ಟೋಬರ್ 26ರಂದು ನಡೆದ ಎಕ್ಸ್ ರೇಯಲ್ಲಿ 26 ವಸ್ತುಗಳು ಕಂಡು ಬಂದಿವೆ. ಇದರಿಂದ ವೈದ್ಯರು ಮತ್ತಷ್ಟು ಉನ್ನತ ತಂತ್ರಜ್ಞಾನದ ಮೂಲಕ ಸಮಗ್ರ ಪರೀಕ್ಷೆಗೆ ಸೂಚಿಸಿದ್ದಾರೆ. ಅಕ್ಟೋಬರ್ 27ರಂದು ನಡೆಸಿದ ಪರೀಕ್ಷೆಯಲ್ಲಿ 56 ವಸ್ತುಗಳು ಇರುವುದು ದೃಢಪಟ್ಟಿವೆ. ಕೂಡಲೇ ದೆಹಲಿ ಅಲಿಗಢ್ ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.
ಶಸ್ತ್ರಚಿಕಿತ್ಸೆ ವೇಳೆ 56 ವಿವಿಧ ರೀತಿಯ ವಸ್ತುಗಳನ್ನು ಯಶಸ್ವಿಯಾಗಿ ಹೊರಗೆ ತೆಗೆಯಲಾಗಿತು. ಈ ವೇಳೆ ಮೂರು ವಿದೇಶೀ ವಸ್ತುಗಳು ಕೂಡ ಸಿಕ್ಕಿವೆ. ಇಷ್ಟಾದರೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ಸ್ವತಃ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದರು. ಆದರೆ ಶಸ್ತ್ರಚಿಕಿತ್ಸೆ ನಂತರ ಬಾಲಕ ಮೃತಪಟ್ಟಿದ್ದಾನೆ.
ಬಾಲಕನ ಬಾಯಿ ಮತ್ತು ಗಂಟಲಿನಲ್ಲಿ ಯಾವುದೇ ಗಾಯ ಇಲ್ಲದ ಕಾರಣ ಯಾರೋ ಬಲವಂತವಾಗಿ ವಸ್ತುಗಳನ್ನು ತುರಕಿರುವ ಸಾಧ್ಯತೆ ಇಲ್ಲ. ಆದರೆ ಬಾಲಕ ಏಕೆ ಇವುಗಳನ್ನು ನುಂಗಿದ ಎಂಬುದು ಯಕ್ಷಪ್ರಶ್ನೆಯಾಗಿದೆ.