ಸುಳ್ಳು ಹೇಳಿ ಹಣ ಪಡೆದು ಮರಳಿಸಿದ ಯುವತಿಯನ್ನು ಹಾಡುಹಗಲೇ ಸಹದ್ಯೋಗಿ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ನೆರವಿಗೆ ಬಾರದ ಜನರು ನೋಡುತ್ತಾ ಮೂಕಪ್ರೇಕ್ಷಕರಾಗಿದ್ದರು.
ಮಂಗಳವಾರ ಯರೆವಾಡದ ಬಿಪಿಓ ಕಂಪನಿಯ ಪಾರ್ಕಿಂಗ್ ಬಳಿ ಈ ಘಟನೆ ನಡೆದಿದ್ದು, 28 ವರ್ಷದ ಯುವತಿ ಶುಭಾಡಾ ಕೊಡಾರೆ ಮೃತಪಟ್ಟಿದ್ದರೆ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಕನೋಜಾ ಈ ಕೃತ್ಯ ಎಸಗಿದ್ದಾನೆ.
ಅನಾರೋಗ್ಯ ಪೀಡತ ತಂದೆಯ ಚಿಕಿತ್ಸೆ ನೆಪದಲ್ಲಿ ಶುಭುಡಾ ಹಣಕಾಸಿನ ನೆರವು ಕೃಷ್ಣನ ಬಳಿ ಕೇಳಿದ್ದಾರೆ. ಕೃಷ್ಣ ಸಾಲದ ರೂಪದಲ್ಲಿ ಹಣ ನೀಡಿದ್ದು, ಇದೇ ರೀತಿ ಹಲವಾರು ಬಾರಿ ಶುಭುಡ ಹಣ ಪಡೆದು ಹಿಂತಿರುಗಿಸಿರಲಿಲ್ಲ. ಹಣ ಕೇಳಿದಾಗಲೆಲ್ಲಾ ತಂದೆ ಇನ್ನೂ ಹುಷಾರಾಗಿಲ್ಲ ಎಂದೇ ಹೇಳುತ್ತಿದ್ದಳು.
ಯುವತಿ ನೆಪ ಹೇಳುವುದರಿಂದ ಅನುಮಾನಗೊಂಡ ಕೃಷ್ಣ ಯುವತಿಯ ಊರಿಗೆ ಹೋಗಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ. ಆದರೆ ತಂದೆ ಆರೋಗ್ಯವಾಗಿದ್ದು ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂಬುದು ತಿಳಿದುಕೊಂಡು ಅಸಮಾಧಾನಗೊಂಡಿದ್ದಾನೆ.
ಕಚೇರಿಗೆ ಬಂದು ಪಾರ್ಕಿಂಗ್ ಬಳಿ ಹಣ ವಾಪಸ್ ಕೇಳಿದಾಗ ಯುವತಿ ಮತ್ತೆ ಅದೇ ಸುಳ್ಳು ಹೇಳಿದಾಗ ಇಬ್ಬರ ನಡುವೆ ಮಾತಿನ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ಕೃಷ್ಣ ಮಚ್ಚಿನಿಂದ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ.
ಯುವತಿ ಮೇಲೆ ಹಾಡುಹಗಲೇ ಮಚ್ಚಿನಿಂದ ಪದೇಪದೆ ಹಲ್ಲೆ ಮಾಡುತ್ತಿದ್ದರೂ ಹಲವಾರು ಜನ ಸುತ್ತಮುತ್ತ ನಿಂತು ವೀಕ್ಷಿಸುತ್ತಿದ್ದರೆ ಹೊರತು ಯಾರೂ ನೆರವಿಗೆ ಬರಲಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ದೃಶ್ಯ ಸರೆಯಾಗಿದೆ.