ತಮಿಳುನಾಡಿನ ಪಳನಿ ದೇವಸ್ಥಾನದಲ್ಲಿ ಪುರುಷರನ್ನು ನಪುಂಸಕರನ್ನಾಗಿ ಮಾಡುವ ಔಷಧ ಬೆರೆಸಲಾಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದ ತಮಿಳುನಾಡಿನ ಸಿನಿಮಾ ನಿರ್ದೇಶಕನ್ನು ಪೊಲೀಸರು ಬಂಧಿಸಿದ್ದಾರೆ.
ಪಳನಿ ದೇವಸ್ಥಾನದಲ್ಲಿ ನೀಡಲಾಗುವ `ಪಂಚಮಿರತಂ’ ಪ್ರಸಾದಲ್ಲಿ ಪುರುಷರ ಶಕ್ತಿ ಕುಂದಿಸುವ ಔಷಧ ಮಿಶ್ರಣ ಮಾಡಲಾಗುತ್ತದೆ ಎಂದು ಆರೋಪ ಮಾಡಿದ್ದ ನಿರ್ದೇಶಕ ಮೋಹನ್ ಜಿ. ಅವರನ್ನು ತಮಿಳುನಾಡಿನ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ದನದ ಮಾಂಸ ಮತ್ತು ಮೀನಿನ ಎಣ್ಣೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವಿವಾದದ ಬೆನ್ನಲ್ಲೇ ಖ್ಯಾತ ತಮಿಳು ನಿರ್ದೇಶಕನ ಆರೋಪ ಭಾರೀ ಸಂಚಲನ ಸೃಷ್ಟಿಸಿತ್ತು. ದ್ರೌಪದಿ, ರುದ್ರತಾಂಡವಂ, ಭಕಸೂರನ್ ಚಿತ್ರಗಳನ್ನು ನಿರ್ದೇಶಿಸಿದ್ದ ಮೋಹನ್ ಜಿ. ಅವರನ್ನು ಬಂಧಿಸಲಾಗಿದೆ.
ಸ್ಥಳೀಯ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮೋಹನ್, ಪಳನಿ ದೇವಸ್ಥಾನದಲ್ಲಿ ನೀಡಲಾಗುವ ಪಂಚಮಿರತಂ ಪ್ರಸಾದದಲ್ಲಿ ಪುರುಷತ್ವ ಕಡಿಮೆ ಮಾಡುವ ಔಷಧ ಬಳಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಆದರೆ ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಬಳಿ ವಿಚಾರಿಸಿದರೆ ಅವರು ಸರಿಯಾದ ಉತ್ತರ ನೀಡುವುದಿಲ್ಲ. ಇದು ದೊಡ್ಡ ಸುದ್ದಿಯಾಗುತ್ತಿದ್ದಂತೆ ಪಂಚಮಿರತಂ ಪ್ರಸಾದವನ್ನೇ ನಿಲ್ಲಿಸಿಬಿಟ್ಟರು ಎಂದು ಹೇಳಿಕೆ ನೀಡಿದ್ದರು.