ಹಾಸನದ ಪ್ರಸಿದ್ಧ ಹಾಸನಾಂಬೆ ದೇವಿಯ 11 ದಿನಗಳ ಉತ್ಸವಕ್ಕೆ ರಾಜ್ಯಾದ್ಯಂತ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ದಾಖಲೆಯ 12.63 ಕೋಟಿ ರೂ. ಮೊತ್ತ ಸಂಗ್ರಹವಾಗಿದೆ.
ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತರೆಯುವ ಹಾಸನಾಂಬೆ ದೇವಸ್ಥಾನದ ಉತ್ಸವ ನವೆಂಬರ್ 3ರಂದು ಸಂಪನ್ನಗೊಂಡಿದೆ. 11 ದಿನಗಳ ಕಾಲ ನಡೆದ ಉತ್ಸವದಲ್ಲಿ 9 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
9 ದಿನಗಳಲ್ಲಿ 20 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷ 14 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದು, ಈ ವರ್ಷ ಶಕ್ತಿ ಯೋಜನೆ ಜಾರಿಯಿಂದ ಭಕ್ತರ ಭೇಟಿ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
20 ಲಕ್ಷದ 40 ಸಾವಿರ ಭಕ್ತರು ದರ್ಶನ ಪಡೆದಿದ್ದು, ಹುಂಡಿ ಹಣ ಬಿಟ್ಟು ಕೇವಲ ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ 9.69 ಕೋಟಿಯಷ್ಟು ಆದಾಯ ಸಂಗ್ರಹವಾಗಿದ್ದರೆ, ಹುಂಡಿ ಕಾಣಿಕೆಯನ್ನು ಸೇರಿಸಿದರೆ 12,63,83,808 ರೂ. ಆದಾಯ ಸಂಗ್ರಹವಾಗಿದೆ. ಇದು ಹಾಸನಾಂಬೆಗೆ ಬಂದ ದಾಖಲೆ ಮೊತ್ತದ ದೇಣಿಗೆಯ ಮೊತ್ತವಾಗಿದೆ.
ನವೆಂಬರ್ 04 500 ಜನರಿಂದ 7 ಗಂಟೆಗಳ ಕಾಲ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 12,63,83,808 ರೂ. ಕಾಣಿಕೆ ಸಂಗ್ರವಾಗಿದೆ. 1000, 300 ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ 9,67,27,180 ರೂ. ಹಾಗೂ ದೇವಸ್ಥಾನದ ಹುಂಡಿಯಲ್ಲಿ 2,55,97,567 ರೂ. ಸೇರಿ 2024ರ ಹಾಸನಾಂಬೆ ದರ್ಶನೋತ್ಸವದಿಂದ ಒಟ್ಟು 12,63,83,808 ರೂಪಾಯಿ ಆದಾಯ ಬಂದಿದೆ.
ನಗದು ಹಣ ಅಲ್ಲದೇ 51 ಗ್ರಾಂ ಚಿನ್ನ ಹಾಗೂ 913 ಗ್ರಾಂ ಬೆಳ್ಳಿ ಕಾಣಿಕೆಯಾಗಿದೆ ಬಂದಿದೆ. ಹಾಸನಾಂಬೆ ದರ್ಶನದ ಇತಿಹಾಸದಲ್ಲೇ ಹರಿದುಬಂದ ದಾಖಲೆಯ ಆದಾಯ ಇದಾಗಿದ್ದು, ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಯ ಪರಿಣಾಮ ಭಕ್ತರ ಭೇಟಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.