ನಮ್ಮ ಮೆಟ್ರೋ ಸಂಸ್ಥೆ 8 ವರ್ಷಗಳ ನಂತರ ಪ್ರಯಾಣದ ಟಿಕೆಟ್ ದರ ಏರಿಕೆಗೆ ಮುಂದಾಗಿದ್ದು, ಶೇ.40ರಿಂದ 45ರಷ್ಟು ಏರಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಕರ್ನಾಟಕ ಸರ್ಕಾರ ಬಸ್ ಪ್ರಯಾಣ ದರ ಶೇ.15ರಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಇದೀಗ ಬಿಎಂಆರ್ ಸಿಎಲ್ ಸಂಸ್ಥೆ 8 ವರ್ಷಗಳ ನಂತರ ಟಿಕೆಟ್ ದರ ಏರಿಸಲು ತೀರ್ಮಾನಿಸಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗಿದೆ.
ಮೆಟ್ರೋ ಪ್ರಯಾಣಿಕರಿಗೆ ಇದುವರೆಗೆ ನೀಡಲಾಗುತ್ತಿದ್ದ ಟಿಕೆಟ್ ದರ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಲು ನಿರ್ಧರಿಸಿದ್ದು, ಇದರಿಂದ ಶೇ.40ರಿಂದ 45ರಷ್ಟು ದರ ಏರಿಕೆಗೆ ಮುಂದಾಗಿದೆ.
ನಿವೃತ್ತ ನ್ಯಾಯಮೂರ್ತಿ ಆರ್. ತಾರಿಣಿ, ನಗರಾಭಿವೃದ್ಧಿ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸತಿಂದರ್ ಪಾಲ್ ಸಿಂಗ್ ಮತ್ತು ನಿವೃತ್ತ ಕರ್ನಾಟಕ ಐಎಎಸ್ ಅಧಿಕಾರಿ ಇವಿ ರಾಮಣ್ಣ ರೆಡ್ಡಿ ಅವರನ್ನೊಳಗೊಂಡ ಸಮಿತಿ ಟಿಕೆಟ್ ದರ ಏರಿಕೆಯ ಪ್ರಸ್ತಾಪ ಮುಂದಿಟ್ಟಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಮೆಟ್ರೋ ರೈಲಿನ ಕನಿಷ್ಠ ದರ 15 ರೂ. ನಿಗದಿ ಆಗಲಿದ್ದು, ಗರಿಷ್ಠ 60ರಿಂದ 85 ರೂ. ಆಗಲಿದೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ದರ ಏರಿಕೆ ಬಿಸಿಯಿಂದ ತತ್ತರಿಸುತ್ತಿರುವ ಬೆಂಗಳೂರಿನ ಜನತೆಗೆ ದೊಡ್ಡ ಆಘಾತ ಉಂಟು ಮಾಡಲಿದ್ದು, ಪ್ರಯಾಣ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಆಗುವ ಸಾಧ್ಯತೆ ಇದೆ.