ಬೆನ್ನು ನೋವಿನಿಂದ ಸರಿಯಾಗಿ ನಡೆಸಲು ಆಗದ ಸ್ಥಿತಿಯಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಸಮಯ ನಿಗದಿಪಡಿಸಲಾಗಿದೆ ಎಂದು ವೈದ್ಯ ಡಾ.ಅಜಯ್ ಹೆಗ್ಡೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರಿಗೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಗಿದೆ. ಆದರೆ ದಿನಾಂಕ ನಿಗದಿಪಡಿಸಿಲ್ಲ ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಕೂಡಲೇ ಶಸ್ತ್ರಚಿಕಿತ್ಸೆ ಮಾಡದೇ ಇದ್ದರೆ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ಹೈಕೋರ್ಟ್ ವೈದ್ಯಕೀಯ ಮಾನದಂಡದ ಮೇಲೆ ಮಧ್ಯಂತರ ಜಾಮೀನು ನೀಡಿದ್ದು, ನಂತರ ಪೂರ್ಣ ಪ್ರಮಾಣದ ಜಾಮೀನು ಮಂಜೂರು ಮಾಡಿತ್ತು. ಜೈಲಿನಿಂದ ಬಿಡುಗಡೆ ಆಗಿ ಎರಡು ತಿಂಗಳು ಆಗುತ್ತಾ ಬಂದರೂ ಶಸ್ತ್ರಚಿಕಿತ್ಸೆಗೆ ಒಳಗಾಗದೇ ಇರುವುದು ಅನುಮಾನ ಮೂಡಿಸಿತ್ತು.
ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದ ದರ್ಶನ್ ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಲು ಒಪ್ಪಿಗೆ ಸೂಚಿಸಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆಯ ದರ್ಶನ್ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಆಪರೇಷನ್ಗೆಾ ಒಳಗಾಗಲಿದ್ದು, ಆ ಬಳಿಕ ಒಂದುವರೆ ತಿಂಗಳು ಸಾಹಸ ದೃಶ್ಯಗಳಲ್ಲಿ ಭಾಗಿಯಾಗುವಂತಿಲ್ಲ ಎಂದು ದರ್ಶನ್ಗೆಗ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಅಜಯ್ ಹೆಗ್ಡೆ ತಿಳಿಸಿದ್ದಾರೆ.
ದರ್ಶನ್ ಶಸ್ತ್ರಚಿಕಿತ್ಸೆ ನಂತರ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗಬಹುದು. ಆದರೆ ಸಾಹಸ ದೃಶ್ಯ ಅಥವಾ ಕುದರೆ ಸವಾರಿ ಮುಂತಾದವುಗಳನ್ನು ಮಾಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಫೆಬ್ರವರಿಯಲ್ಲಿ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಚಿತ್ರೀಕರಣಕ್ಕೂ ಮುನ್ನ ಅಪರೇಷನ್ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದ್ದು, ಶಸ್ತ್ರಚಿಕಿತ್ಸೆ ನಂತರ 3 ದಿನ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈಗಾಗಲೇ ದರ್ಶನ್ ವರ್ಕೌಟ್ ಶುರು ಮಾಡಿದ್ದು, ಆದರೆ ಅಪ್ಪರ್ ಬಾಡಿ, ಲೋಯರ್ ಬಾಡಿ ವರ್ಕೌಟ್ ಮಾಡಲು ಅವಕಾಶ ನೀಡಲಾಗಿಲ್ಲ. ಅಲ್ಲದೇ ಡೇವಿಲ್ ಚಿತ್ರದ ಡಬ್ಬಿಂಗ್ ನಲ್ಲಿ ಕೂಡ ಮುಗಿಸುತ್ತಿದ್ದಾರೆ ಎಂದು ಹೇಳಲಾಗಿದೆ.