ಒಂದು ಸಿಗರೇಟ್ ಸೇದುವುದರಿಂದ ಪುರುಷರ ಆಯಸ್ಸಿನಲ್ಲಿ ಸುಮಾರು 20 ನಿಮಿಷ ಕಡಿಮೆ ಆಗುತ್ತದೆ. ಮಹಿಳೆಯರಿಗೆ ಇನ್ನೂ ಹೆಚ್ಚು ಆಯಸ್ಸು ಕಡಿಮೆ ಆಗಲಿದೆ ಎಂಬ ಆಘಾತಕಾರಿ ವರದಿಯನ್ನು ಇತ್ತೀಚಿನ ಸಂಶೋಧನಾ ವರದಿ ಹೇಳಿದೆ.
ಈ ಹಿಂದಿನ ಸಂಶೋಧನೆಗಳಲ್ಲಿ ಸಿಗರೇಟು ಸೇದುವುದರಿಂದ ಸರಿಸುಮಾರು 11 ನಿಮಿಷಗಳಷ್ಟು ಆಯಸ್ಸು ಕಡಿಮೆ ಆಗುತ್ತದೆ ಎಂದು ಕಂಡು ಬಂದಿತ್ತು. ಆದರೆ ಜನಸಂಖ್ಯೆ ಆಧರಿಸಿ ನಡೆಸಿದ ಹೊಸ ಸಮೀಕ್ಷೆಯಲ್ಲಿ ಒಂದು ಸಿಗರೇಟು ಸೇದುವುದರಿಂದ ಪುರುಷರು ಸುಮಾರು 20 ನಿಮಿಷ ಆಯಸ್ಸು ಕುಸಿತ ಕಂಡು ಬಂದಿದ್ದರೆ, ಮಹಿಳೆಯರು 22 ನಿಮಿಷಗಳಷ್ಟೇ ಆಯಸ್ಸು ಕಳೆದುಕೊಳ್ಳಲಿದ್ದಾರೆ.
ಸಿಗರೇಟು ಸೇವನೆಯನ್ನು ತಕ್ಷಣ ಬಿಡಬೇಕು ಅಂದರೆ ಜನವರಿ 1 ಅತ್ಯಂತ ಸೂಕ್ತ ಸಮಯ ಎಂದು ಸಂಶೋಧನಾ ವರದಿ ಶಿಫಾರಸು ಮಾಡಿದೆ. 10 ಸಿಗರೇಟು ಸೇದಿದರೆ ಒಂದು ದಿನದ ಆಯಸ್ಸು ಕಡಿಮೆ ಆಗಲಿದೆ. ಇದರಿಂದ ಜನವರಿಯಲ್ಲಿ ಸಿಗರೇಟು ಸೇದುವುದು ಬಿಟ್ಟರೆ ಫೆಬ್ರವರಿ ಒಂದು ವಾರ ಹೆಚ್ಚು ಬಾಳಿದಂತೆ ಆಗುತ್ತದೆ ಎಂದು ವರದಿ ಹೇಳಿದೆ.
ಸಿಗರೇಟು ಮತ್ತು ಮದ್ಯವನ್ನು ಎಷ್ಟು ಬೇಗ ತ್ಯಜಿಸುತ್ತಿರೋ ಅಷ್ಟು ಹೆಚ್ಚು ಬಾಳುತ್ತೀರಿ. ನೀವು ಕುಡಿತ ಮತ್ತು ಮದ್ಯ ಬಿಟ್ಟ ಕೂಡಲೇ ನಿಮ್ಮ ಆರೋಗ್ಯದಲ್ಲಿ ಸುಧಾರಣೆಗಳು ಕಂಡು ಬರುತ್ತವೆ. ಕುಡಿತ ಮತ್ತು ಮದ್ಯ ತ್ಯಜಿಸಿದರೆ 60 ವರ್ಷ ಬಾಳುವ ವ್ಯಕ್ತಿ 70 ವರ್ಷದವರೆಗೆ ಬದುಕಬಹುದು ಎಂದು ಯುಸಿಎಲ್ ಆಲ್ಕೋಹಾಲ್ ಅಂಡ್ ಟೊಬ್ಯಾಕೊ ಸಂಶೋಧನಾ ಗುಂಪಿನ ಪ್ರಿನ್ಸಿಪಾಲ್ ಡಾ.ಸಾರಾ ಜಾಕ್ಸನ್ ಹೇಳಿದ್ದಾರೆ.