ಜಾರಿ ನಿರ್ದೇಶನಾಲಯ ಹಾಗೂ ಬಿಜೆಪಿ ಮುಖಂಡರು ಕಿರುಕುಳ ನೀಡಿದ್ದಾರೆ ಎಂದ ಆರೋಪಿಸಿ ಉದ್ಯಮಿ ಹಾಗೂ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಸೆಹೋರೆ ಜಿಲ್ಲೆಯಲ್ಲಿ ನಡೆದಿದೆ.
ಆಸ್ತಾ ಪಟ್ಟಣದ ನಿವಾಸಿ ಶುಕ್ರವಾರ ಬೆಳಿಗ್ಗೆ ಉದ್ಯಮಿ ಮನೋಜ್ ಪಾರ್ಮರ್ ಪತ್ನಿ ನೇಹಾ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೋಜ್ ಪಾರ್ಮರ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆದಿದೆ.
ಮನೋಜ್ ಪಾರ್ಮರ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ನಲ್ಲಿ ಇಡಿ ಮತ್ತು ಬಿಜೆಪಿ ಕಾಟ ತಡೆಯಲಾರದೇ ಈ ದಾರಿ ಹಿಡಿದಿದ್ದು, ಅನಾಥರಾದ ನನ್ನ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.
ಪಾರ್ಮರ್ ಹಾಗೂ ಪತ್ನಿ ಕಾಂಗ್ರೆಸ್ ಬೆಂಬಲಿಗರಾಗಿದ್ದರು. ಪಾರ್ಮರ್ ಅವರ ಮಕ್ಕಳು ಭಾರತ್ ಜೋಡೋ ಕಾರ್ಯಕ್ರಮದಲ್ಲಿ ತಮ್ಮ ಕೂಡಿಟ್ಟ ಹುಂಡಿ ಹಣವನ್ನು ರಾಹುಲ್ ಗಾಂಧಿ ಅವರಿಗೆ ನೀಡಿದ್ದರು. ಈ ಕಾರಣಕ್ಕಾಗಿ ಇಡಿ ಅವರಿಗೆ ಕಿರುಕುಳ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪೊಲೀಸರ ಸೂಪರಿಟೆಂಡೆಂಟ್ ಆಕಾಶ್ ಅಮ್ಲಾಕರ್ ಡೆತ್ ನೋಟ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆ ಘಟನೆಯಿಂದ ಕುಟುಂಬ ಆಘಾತದಲ್ಲಿ ಇರುವುದರಿಂದ ತನಿಖೆ ಆರಂಭಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ತನಿಖೆ ಪ್ರಗತಿ ಹಂತದಲ್ಲಿ ಇರುವುದರಿಂದ ಡೆತ್ ನೋಟ್ ನಲ್ಲಿ ಇರುವ ವಿವರಗಳನ್ನು ಬಹಿರಂಗಪಡಿಸದೇ ಇರಲು ಪೊಲೀಸರು ನಿರ್ಧರಿಸಿದ್ದಾರೆ. ಆದರೆ ಡೆತ್ ನೋಟ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು, ಪ್ರಧಾನಿ ಮೋದಿ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ.