Monday, September 16, 2024
Google search engine
Homeಅಪರಾಧಬಿ.ಇಡಿ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ನೆರವು: ಗುಲ್ಬರ್ಗ ವಿವಿ ಕುಲಸಚಿವೆ ಸೇರಿ 5 ಮಂದಿಯ ವಿರುದ್ಧ...

ಬಿ.ಇಡಿ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ನೆರವು: ಗುಲ್ಬರ್ಗ ವಿವಿ ಕುಲಸಚಿವೆ ಸೇರಿ 5 ಮಂದಿಯ ವಿರುದ್ಧ ಎಫ್ ಐಆರ್ ದಾಖಲು!

ಬಿ.ಇಡಿ ಪರೀಕ್ಷೆಗೆ ಹೊರರಾಜ್ಯದ ನಕಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಸೇರಿ ಐವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಕಟ್ಟಿ, ಅಲ್‌ಬದರ್ ಕಾಲೇಜಿನ ಪ್ರಾಂಶುಪಾಲ ಮಲ್ಲಮ್ಮ ಮಂಠಾಳೆ, ಬಿ.ಇಡಿ ವಿಷಯ ನಿರ್ವಹಕ ಸ್ವರೂಪ ಭಟ್ಟರ್ಕಿ, ಲಿಖಿತ ಪರೀಕ್ಷೆ ಹಿರಿಯ ಮೇಲ್ವಿಚಾರಕ ಮೌನೇಶ ಅಕ್ಕಿ ಮತ್ತು ಇಂದಿರಾ ಗಾಂಧಿ ಬಿ.ಇಡಿ ಕಾಲೇಜು ಅಧ್ಯಕ್ಷ ಮೌಲಾ ಪಟೇಲ್‌ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ನಾಗರಾಜ ಹಣಮಂತರಾಯ ನೀಡಿದ ದೂರಿನ ಅನ್ವಯ ಬಿಎನ್‌ಎಸ್‌ ಸೆಕ್ಷನ್ 319 (2), 318 (4), 336 (2) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜುಲೈ 1ರಿಂದ 7ರವರೆಗೆ ನಡೆದ ಬಿ.ಇಡಿ ಪರೀಕ್ಷೆಯ ಅಲ್‌ ಬದರ್ ಕಾಲೇಜಿನಲ್ಲಿ ಅಕ್ರಮವಾಗಿ ಹೊರ ರಾಜ್ಯದ 100 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.

ನ್ಯಾಯಾಲಯದ ಆದೇಶದ ಪ್ರಕಾರ, ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ 24ಸಿ46501ರಿಂದ 24ಸಿ46522 ವರೆಗಿನ (22 ವಿದ್ಯಾರ್ಥಿ) ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿಸಲಾಗಿತ್ತು. ಈ ಆದೇಶ ಉಲ್ಲಂಘಿಸಿ 24ಸಿ46501ರಿಂದ 24ಸಿ46600ವರೆಗೆ ನಕಲು ನೋಂದಣಿ ಸಂಖ್ಯೆಗಳ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡಿ ವಂಚಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪರೀಕ್ಷೆ ಮುಗಿಯುವ ಅರ್ಧ ಗಂಟೆ ಮೊದಲೇ ವಿದ್ಯಾರ್ಥಿಗಳು ಹೊರ ಬರುತ್ತಿದ್ದರು. ಅವರ ಕೈಯಲ್ಲಿನ ಪ್ರವೇಶ ಪತ್ರಗಳು ಪರಿಶೀಲಿಸಿದಾಗ ಕೈ ಬರಹದಲ್ಲಿ ಇರುವುದು ಕಂಡುಬಂತು. ಯುಜಿಸಿ ಪ್ರಕಾರ ಯುಯುಸಿಎಂಎಸ್‌ನಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ಪ್ರವೇಶ ಪತ್ರ ನೀಡಬೇಕು ಎಂಬ ನಿಯಮವಿದೆ. ಆದರೆ, ಕೈ ಬರಹದ ಪ್ರವೇಶ ಪತ್ರ ನೋಡಿದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿ ನಾಗರಾಜ ಅವರು ದೂರು ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments