ಈಗಷ್ಟೇ ಮಧ್ಯಾಹ್ನದ ಊಟ ಮುಗಿಯಿತು..! ಅದೆಂಥ ಒಳ್ಳೇ ಊಟ, ಹೊಟ್ಟೆ ತುಂಬಿತು. ಈಗ ಕಣ್ಣೆಳೆಯುತ್ತಿದೆಯೇ..? ನಿದ್ದೆಯೊಂದಿಗೆ ಗುದ್ದಾಡುತ್ತಿದ್ದೀರೇ..? ನಿಮ್ಮ ಕಚೇರಿಯ ಮೇಜಿನ ಮೇಲೆ ನಿಷ್ಕ್ರೀಯರಾಗಿ ಕುಳಿತಿದ್ದೀರಲ್ಲವೇ? ಯೋಚನೆ ಬೇಡ… ಇದು ನಿಮ್ಮೊಬ್ಬರ ಸಮಸ್ಯೆಯಲ್ಲ.ಊಟ ಮಾಡಿದ ಮೇಲೆ ಹೆಚ್ಚಿನ ಜನರನ್ನು ಕಾಡುವ ಸಮಸ್ಯೆಯಿದು. ಆದರೆ ಯಾಕೆ ಹೀಗಾಗುತ್ತದೆ…? ಇಲ್ಲಿ ನಾವು ಅದಕ್ಕೆ ಕೆಲವು ಕಾರಣಗಳನ್ನು ಕಂಡುಹಿಡಿಯುವ ಪ್ರಯತ್ನ ಮಾಡಿದ್ದೇವೆ.
ನೀವು ನಿಮ್ಮ ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಾಗಿ ತಿನ್ನುವುದರಿಂದ ನಿಮ್ಮ ಇನ್ಸುಲಿನ್ (ಮೇದೋಜಿರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಸಕ್ಕರೆಯನ್ನು ಜೀರ್ಣಗೊಳಿಸುವ ಹಾರ್ಮೋನ್) ಮಟ್ಟ ಕುಸಿಯುತ್ತದೆ. ನೀವು ತಿನ್ನುವ ಎಲ್ಲಾ ಪದಾರ್ಥಗಳಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ನಿಮ್ಮ ಮೇದೋಜಿರಕ ಗ್ರಂಥಿಯು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ.
ನೀವು ಜಾಸ್ತಿ ತಿಂದರೆ ಮೇದೋಜಿರಕ ಗ್ರಂಥಿ ಕೂಡ ಜಾಸ್ತಿ ಇನ್ಸುಲಿನ್ ಅನ್ನು ಬಿಡುಗಡೆ ಮಾಡಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ಇನ್ಸುಲಿನ್ ಸ್ರವಿಕೆಯಾದರೆ ನಿಮ್ಮ ದೇಹದಲ್ಲಿನ ನಿದ್ರಾ ಹಾರ್ಮೋನ್ ಗಳು ಮೆದುಳಿಗೆ ಸಂಚರಿಸಿ, ಸೆರೊಟೊನಿನ್ (serotonin) ಮತ್ತು ಮೆಲಟೊನಿನ್ (melatonin) ಆಗಿ ಬದಲಾವಣೆಗೊಳ್ಳುತ್ತದೆ.ಮೆಲಟೊನಿನ್ ಕೂಡ ಒಂದು ನಿದ್ರಾ ಹಾರ್ಮೋನ್.
ಹಾಗೆಯೇ ನೀವು ಜಾಸ್ತಿ ಪ್ರಮಾಣದ ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸಿದಾಗ ಆ ಭಾರೀ ಊಟವನ್ನು ಜೀರ್ಣಿಸಿಕೊಳ್ಳಲು ದೇಹ ಹೆಚ್ಚು ಶಕ್ತಿಯನ್ನು ಉಪಯೋಗಿಸಿಕೊಳ್ಳಬೇಕಾಗುತ್ತದೆ. ನೀವು ಅಗತ್ಯಕ್ಕಿಂತ ಹೆಚ್ಚು ತಿಂದಾಗ ಅದನ್ನು ಜೀರ್ಣ ಮಾಡಲು ನಿಮ್ಮ ಡೈಜೆಸ್ಟಿವ್ ಸಿಸ್ಟಮ್ ಶೇಕಡಾ 60ರಿಂದ 70ರಷ್ಟು ದೇಹದ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ದೇಹದ ಇತರ ಭಾಗಗಳೂ ಕೂಡ ಜೀರ್ಣಕ್ರೀಯೆಗಾಗಿ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ.
ನಿಮ್ಮ ದೇಹದ ಎಲ್ಲಾ ಭಾಗಗಳೂ ನೀವು ಸೇವಿಸಿದ ಆಹಾರವನ್ನು ಕರಗಿಸಲು ಶ್ರಮಿಸುವುದರಿಂದ ಈ ಕ್ರೀಯೆಯು ನಿಮ್ಮನ್ನು ನಿದ್ದೆಗೆ ದೂಡುತ್ತದೆ. ಹೆಚ್ಚಿನ ಪ್ರಮಾಣದ ಕಾರ್ಬೊಹೈಡ್ರೇಟ್ಸ್ ಅಷ್ಟೇ ಅಲ್ಲದೆ ಹೆಚ್ಚಿನ ಪ್ರಮಾಣದ ಪ್ರೋಟೀನ್ ನಿಂದ ಕೂಡ ಇದೇ ರೀತಿಯ ಪರಿಣಾಮ ಉಂಟಾಗುತ್ತದೆ.
ನೀವು ಇದನ್ನು ಹೇಗೆ ಎದುರಿಸುತ್ತೀರಿ? ಅತೀಯಾಗಿ ತಿನ್ನುವುದು, ಕೊಬ್ಬಿನಿಂದ ಕೂಡಿದ ಆಹಾರ ಸೇವನೆ ನಿಮ್ಮ ದೇಹವನ್ನು ಸುಸ್ತಾಗಿಸುತ್ತದೆ. ನೀವು ಎಷ್ಟು ಜಾಸ್ತಿ ತಿನ್ನುತ್ತೀರೋ ಅದನ್ನು ಕರಗಿಸಲು ಅಷ್ಟೇ ಶಕ್ತಿಯನ್ನು ನಿಮ್ಮ ದೇಹ ವ್ಯಯಿಸಬೇಕಾಗುತ್ತದೆ. ಹಾಗಾಗಿ ಸಣ್ಣ – ಸಣ್ಣ ಪ್ರಮಾಣದ ಆಹಾರ ಸೇವನೆ ಮಾಡಿದರೆ ಈ ನಿದ್ರಾ ಸಮಸ್ಯೆಯಿಂದ ಹೊರಬರಬಹುದು.