ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಏಷ್ಯಾದಿಂದ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಪ್ರಧಾನಿ ಮೋದಿಗೆ ಆಹ್ವಾನ ಬಾರದೇ ಇರುವುದು ಅಚ್ಚರಿ ಮೂಡಿಸಿದೆ.
ಚೀನಾ ಅಧ್ಯಕ್ಷ ಕ್ಷಿ ಅವರನ್ನು ಹೊರತುಪಡಿಸಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಏಷ್ಯಾದ ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ. ಈ ತಿಂಗಳ 20ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವಾಷಿಂಗ್ಟನ್ ಡಿಸಿ ಮತ್ತು ಬೀಜಿಂಗ್ ನಡುವಿನ ರಾಜಕೀಯ ಪೈಪೋಟಿಯ ಹಿನ್ನೆಲೆಯಲ್ಲಿ ಇದು ಮಹತ್ವದ್ದಾಗಿದೆ. ಕ್ಷಿ ಅವರಿಗೆ ಆಹ್ವಾನವನ್ನು ದೃಢಪಡಿಸಿದ ಟ್ರಂಪ್ ವಕ್ತಾರ ಕರೋಲಿ ಲೀವಿಟ್, ಅಧ್ಯಕ್ಷ ಟ್ರಂಪ್ ಕೇವಲ ಮಿತ್ರರಾಷ್ಟ್ರಗಳಲ್ಲದೆ ಭಿನ್ನಾಸಕ್ತಿ ಇರುವ ದೇಶಗಳ ನಾಯಕರೊಂದಿಗೆ ಮುಕ್ತ ಸಂವಾದ ಬಯಸುತ್ತಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಹೇಳಿದರು.
ಚೀನಾದ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ, ಬದಲಿಗೆಉಪಾಧ್ಯಕ್ಷ ಹಾನ್ ಜೆಂಗ್ ಅಥವಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಕಳುಹಿಸಬಹುದು ಎನ್ನಲಾಗಿದೆ.
ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ, ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಮತ್ತು ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಅವರನ್ನೂ ಸಹ ಆಹ್ವಾನಿಸಲಾಗಿದೆ.