ಕೇಂದ್ರ ಸರ್ಕಾರ ಜಿಎಸ್ ಟಿ ಹಣದಲ್ಲಿ ನಮ್ಮ ಪಾಲು ಸರಿಯಾಗಿ ನೀಡದೇ ಇರುವುದರಿಂದ ರೈತರಿಗೆ ಸಾಲ ನೀಡಲು ಆಗುತ್ತಿಲ್ಲ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ ಸರ್ಕಾರದಿಂದ 9300 ಕೋಟಿ ರೂ. ಜಿಎಸ್ ಟಿ ಪಾಲು ಬರಬೇಕಿತ್ತು. ಆದರೆ 2340 ಕೋಟಿ ರೂ. ಮಾತ್ರ ಬಂದಿದೆ ಎಂದು ಹೇಳಿದರು.
ನಮ್ಮ ಪಾಲಿನ 9300 ಕೋಟಿ ರೂ. ನೀಡಲು ಕೇಂದ್ರ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿ ಮೂಲಕ ಪತ್ರ ಬರೆಯಲಾಗಿದೆ. ಆದರೆ ಆರ್ಥಿಕ ಇಲಾಖೆಗೆ ಪತ್ರ ಬರೆಯಿರಿ ಎಂಬ ಉತ್ತರ ಬಂದಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಕೂಡ ಪ್ರಧಾನಿಗೆ ಪತ್ರ ಬರೆದು ಜಿಎಸ್ ಟಿ ಹಣಕ್ಕಾಗಿ ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣವನ್ನು ಸರಿಯಾಗಿ ಕೊಡದೇ ಇರುವ ಕಾರಣ ಈ ಬಾರಿ ರೈತರಿಗೆ ಕಡಿಮೆ ಬಡ್ಡಿ ದರ ಸಾಲ ನೀಡಲು ಸಾಧ್ಯವಾಗುವುದಿಲ್ಲ. ನಬಾರ್ಡ್ ನಮಗೆ ಶೇ.4.5ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ನಾವು ರೈತರಿಗೆ ಬಡ್ಡಿರಹಿತ ಹಾಗೂ ಅಲ್ಪಾವಧಿ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ನೀಡುತ್ತಿದೆ ಎಂದು ಅವರು ವಿವರಿಸಿದರು.
ರೈತರಿಗೆ ಸಾಲ ನೀಡುವುದು ಸೇರಿದಂತೆ ವಿವಿಧ ಕೆಲಗಳಿಗೆ ನಮ್ಮ ಪಾಲಿನ ತೆರಿಗೆ ಮೊತ್ತವನ್ನು ಕೇಂದ್ರ ನೀಡಬೇಕು. ನಾವು ಕನಿಷ್ಠ 5500 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಈ ಹಣ ಬಂದರೆ ರೈತರಿಗೆ ಸಾಲ ನೀಡಲು ಆದ್ಯತೆ ನೀಡಲಾಗುವುದು. ಈಗಾಗಲೇ ರೈತರಿಗೆ ರಾಜ್ಯ ಸರ್ಕಾರ ಸಬ್ಸಿಡಿ ದರದಲ್ಲಿ ಬೀಜ, ರಸಗೊಬ್ಬರ ನೀಡುತ್ತಿದೆ ಎಂದು ರಾಜಣ್ಣ ವಿವರಿಸಿದರು.