Saturday, June 29, 2024
Google search engine
Homeತಾಜಾ ಸುದ್ದಿಬನ್ನೇರುಘಟ್ಟದಲ್ಲಿ ದೇಶದಲ್ಲೇ ಅತೀ ದೊಡ್ಡ ಚಿರತೆ ಸಫಾರಿಗೆ ಸಚಿವ ಈಶ್ವರ ಖಂಡ್ರೆ ಚಾಲನೆ!

ಬನ್ನೇರುಘಟ್ಟದಲ್ಲಿ ದೇಶದಲ್ಲೇ ಅತೀ ದೊಡ್ಡ ಚಿರತೆ ಸಫಾರಿಗೆ ಸಚಿವ ಈಶ್ವರ ಖಂಡ್ರೆ ಚಾಲನೆ!

ಬನ್ನೇರುಘಟ್ಟ ಉದ್ಯಾನದಲ್ಲಿ ನೂತನವಾಗಿ ನಿರ್ಮಿಸಿರುವ ದಕ್ಷಿಣ ಭಾರತದ ಪ್ರಥಮ ಮತ್ತು ದೇಶದಲ್ಲಿಯೇ ಅತಿ ದೊಡ್ಡ ಚಿರತೆ ಸಫಾರಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದ್ದಾರೆ.

ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟದಲ್ಲಿ ಬುಧವಾರ ಚಿರತೆ ಸಫಾರಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಹುಲಿ ಸಫಾರಿ, ಸಸ್ಯಹಾರಿ ಪ್ರಾಣಿಗಳ ಸಫಾರಿ, ಸಿಂಹ ಸಫಾರಿ, ಕರಡಿ ಸಫಾರಿ ಇರುವ ಬನ್ನೇರುಘಟ್ಟ ಉದ್ಯಾನದಲ್ಲಿ 8  ಚಿರತೆಗಳನ್ನು ತೆರೆದ ಕಾಡಿನಲ್ಲಿ ಸಫಾರಿಗೆ ಬಿಡಲಾಗಿದೆ. ಇದು ಈ ಉದ್ಯಾನದ ಮತ್ತೊಂದು ಆಕರ್ಷಣೆಯಾಗಿದ್ದು, ಪ್ರವಾಸಿಗರು ಮತ್ತು ಸಂದರ್ಶಕರನ್ನು ಸೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿರತೆ ಸಫಾರಿ ಪ್ರದೇಶವು ನೈಸರ್ಗಿಕ ಬಂಡೆಗಳಿಂದ ಹಾಗೂ ಅರೆ-ಎಲೆ ಉದುರುವ ಕಾಡುಗಳಿಂದ ಕೂಡಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ, 20 ಹೆಕ್ಟೇರ್ ಪ್ರದೇಶವನ್ನು ಗುರುತಿಸಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಒಟ್ಟು 4.5 ಕೋಟಿ ರೂ. ವೆಚ್ಚದಲ್ಲಿ ಸುರಕ್ಷಿತ ವಿನ್ಯಾಸ ರೂಪಿಸಲಾಗಿದೆ. ಈ ಇಡೀ ಪ್ರದೇಶಕ್ಕೆ 4.5 ಮೀಟರ್ ಎತ್ತರದ ಲಂಬ ಚೈನ್ ಲಿಂಕ್ ಜಾಲರಿ ಅಳವಡಿಸಲಾಗಿದ್ದು, ಎಂಎಸ್ ಶೀಟ್ ಗಳನ್ನು 1.5 ಮೀಟರ್ ಎತ್ತರವಿರುವ 30ಡಿಗ್ರಿ ಇಳಿಜಾರಿನ ಕೋನದಲ್ಲಿ ಹಾಕುವ ಮೂಲಕ ಚಿರತೆಗಳು ಹೊರಗೆ ಬಾರದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಬನ್ನೇರುಘಟ್ಟ ಸುತ್ತ ಮುತ್ತ ಬೆಟ್ಟಗುಡ್ಡಗಳಿದ್ದು, ಇದು ಚಿರತೆಗಳು ವಾಸಿಸಲು ಉತ್ತಮ ತಾಣವಾಗಿದೆ. ಹೀಗಾಗಿಯೇ ಇಲ್ಲಿ ಹೆಚ್ಚಿನ ಸಂಖ್ಯೆ ಚಿರತೆಗಳೂ ಇವೆ. ಈ ಪೈಕಿ ಹೊಲ, ಗದ್ದೆಗಳಲ್ಲಿ ಹೆಣ್ಣು ಚಿರತೆಗಳು ಮರಿ ಹಾಕಿ ಹೋಗುವ ಸಂದರ್ಭದಲ್ಲಿ ಅಂತಹ ಮರಿಗಳನ್ನು ತಂದು ಉದ್ಯಾನದಲ್ಲಿ ಪಾಲನೆ ಮಾಡಲಾಗುತ್ತದೆ. ಪ್ರಸ್ತುತ ಉದ್ಯಾನದಲ್ಲಿ 14 ಚಿರತೆಗಳಿವೆ ಎಂದೂ ಮಾಹಿತಿ ನೀಡಿದರು. ಸ್ವಾಗತ ಕಮಾನನ್ನೂ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸುನೀಲ್ ಪನ್ವಾರ್, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments