ಮಧ್ಯಮ ವೇಗಿ ವಾಸುಕಿ ಕೌಶಿಕ್ ಮಾರಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ 89 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿದ್ದು, ಕರ್ನಾಟಕ ತಂಡ ಮೊದಲ ದಿನವೇ ಮುನ್ನಡೆ ಸಾಧಿಸಿ ಹಿಡಿತ ಸಾಧಿಸಿದೆ.
ಲೊಕ್ನೋದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಉತ್ತರ ಪ್ರದೇಶ ತಂಡ 40.4 ಓವರ್ ಗಳಲ್ಲಿ ಮೊದಲ ಇನಿಂಗ್ಸ್ ನಲ್ಲಿ 89 ರನ್ ಗೆ ಆಲೌಟಾಯಿತು.
ನಂತರ ಬ್ಯಾಟ್ ಮಾಡಲಿಳಿದ ಕರ್ನಾಟಕ ತಂಡ ದಿನದಾಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು ೧೨೭ ರನ್ ಗಳಿಸುವ ಮೂಲಕ ಮೊದಲ ದಿನವೇ ಮೊದಲ ಇನಿಂಗ್ಸ್ ನಲ್ಲಿ 38 ರನ್ ಮುನ್ನಡೆ ಸಾಧಿಸಿದೆ.
ಕರ್ನಾಟಕ ತಂಡ 5 ರನ್ ಕಲೆಹಾಕುವಷ್ಟರಲ್ಲಿ ಖಾತೆ ತೆರೆಯದೇ ಇಬ್ಬರು ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ನಿಕಿನ್ ಮತ್ತು ಸಮ್ರನ್ ನಿರಾಸೆ ಮೂಡಿಸಿದರೂ ನಾಯಕ ಮಯಾಂಕ್ ಅಗರ್ ವಾಲ್ ಮತ್ತು ಕೃಷ್ಣನ್ ಶ್ರೀಜಿತ್ ೩ನೇ ವಿಕೆಟ್ ಗೆ 48 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು.
ಮಯಾಂಕ್ 30 ರನ್ ಬಾರಿಸಿ ಔಟಾದರೆ ಕೃಷ್ಣನ್ 77 ಎಸೆತಗಳಲ್ಲಿ 9 ಬೌಂಡರಿ ಸೇರಿದ 68 ರನ್ ಬಾರಿಸಿ ತಂಡವನ್ನು ಆಧರಿಸಿದರು. ಶ್ರೇಯಸ್ ಗೋಪಾಲ್ 14 ರನ್ ಬಾರಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಉತ್ತರ ಪ್ರದೇಶ ತಂಡ ವಾಸುಕಿ ದಾಳಿಗೆ ತತ್ತರಿಸಿ ರನ್ ಗಳಿಸಲು ಪರದಾಡಿತು. ವಾಸುಕಿ ೨೦ ರನ್ ಬಾರಿಸಿ ೫ ವಿಕೆಟ್ ಕಬಳಿಸಿದರೆ, ವಿದ್ಯಾಧರ್ ಪಾಟೀಲ್ ೨ ವಿಕೆಟ್ ಗಳಿಸಿದರು.
ಉತ್ತರ ಪ್ರದೇಶ ಪರ ಸಮೀರ್ ರಿಜ್ವಿ [25], ಕೃತ್ಯಾಗ ಸಿಂಗ್ [13], ಸೌರಭ್ ಕುಮಾರ್ [13] ಮಾತ್ರ ಎಡಂಕಿಯ ಮೊತ್ತ ಕಲೆ ಹಾಕಿದರೆ ಉಳಿದವರು ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು.