ಅತ್ಯಂತ ಭಾರೀ ಬಿಗಿಭದ್ರತೆ ಹೊಂದಿರುವ ಮಧ್ಯಪ್ರದೇಶದ ಭೋಪಾಲ್ ಸೆಂಟ್ರಲ್ ಜೈಲಿನಲ್ಲಿ ಚೀನಾ ನಿರ್ಮಿತ ಡ್ರೋಣ್ ಹಾರಾಡುತ್ತಿದ್ದು, 8 ದಿನಗಳ ನಂತರ ಪತ್ತೆಯಾಗಿರುವ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಐಎಸ್ ಒ ಪ್ರಮಾಣ ಪತ್ರ ಪಡೆದ ಅತ್ಯಂತ ಬಿಗಿ ಭದ್ರತೆಯ `ಅಂಡಾ ಸೆಲ್’ (ಮೊಟ್ಟೆಯಾಕಾರ ವಿಭಾಗ) ಎಂದೇ ಖ್ಯಾತಿ ಪಡೆದಿರುವ ಬಿ ಸೆಲ್ ಬಳಿ ಡ್ರೋಣ್ ಪತ್ತೆಯಾಗಿದ್ದು, ಈ ಸೆಲ್ ನಲ್ಲಿ ದೇಶಕ್ಕೆ ಅಪಾಯ ತಂದೊಡ್ಡಿದ 69 ಉಗ್ರರು ಇದ್ದಾರೆ.
ಜೈಲಿನ ಒಳಗೆ ಅದರಲ್ಲೂ 8 ದಿನಗಳ ನಂತರ ಡ್ರೋಣ್ ಪತ್ತೆಯಾಗಿರುವುದು ಆತಂಕ ಉಂಟುಮಾಡಿದ್ದು, ವಿಧ್ವಂಸಕ ಕೃತ್ಯ ಎಸಗುವ ಉಗ್ರರ ಮೇಲೆ ನಿಗಾ ಇಡಲು ಇಟ್ಟಿರುವ ಭದ್ರತಾ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಮಧ್ಯಪ್ರದೇಶ ಸರ್ಕಾರದ ಸಚಿವ ನರೇಂದ್ರ ಶಿವಾಜಿ ಪಾಟೀಲ್ ಭದ್ರತಾ ವೈಫಲ್ಯವನ್ನು ಕಡೆಗಣಿಸಿದ್ದು, ಕೊನೆಗೂ ನಮ್ಮ ಭದ್ರತಾ ಸಿಬ್ಬಂದಿಯೇ ಈ ಡ್ರೋಣ್ ಪತ್ತೆ ಹಚ್ಚಿದ್ದಾರೆ. ಯಾವುದೇ ಅಪಾಯ ಆಗುವ ಮುನ್ನ ಪತ್ತೆಹಚ್ಚಿದ್ದಕ್ಕೆ ಶ್ಲಾಘಿಸಬೇಕು ಎಂದು ಬೆನ್ನು ತಟ್ಟಿಕೊಂಡಿದ್ದಾರೆ.
ಭದ್ರತಾ ವ್ಯವಸ್ಥೆಯಲ್ಲಿ ಸಂಪರ್ಕ ಕೊರತೆ ಹಾಗೂ ಗೊಂದಲದಿಂದ ಈ ಲೋಪ ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ಲೋಪ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಜೈಲಿನ ಸೂಪರಿಟೆಂಡೆಂಟ್ ರಾಕೇಶ್ ಭಾಂಗ್ರೆ ಹೇಳಿದ್ದಾರೆ.
ಜೈಲಿನೊಳಗೆ ಪತ್ತೆಯಾದ ಡ್ರೋಣ್ ನಲ್ಲಿ ಎರಡು ಕ್ಯಾಮರಾಗಳಿದ್ದವು. ಸ್ಥಳೀಯ ವೈದ್ಯರಿಗೆ ಇದು ಸೇರಿದ್ದು, ಇದನ್ನು ಅವರು ಮಗನಿಗಾಗಿ ಖರೀದಿಸಿದ್ದರು. ಡಿಸೆಂಬರ್ 31ರಂದು ಅದು ನಿಯಂತ್ರಣ ಕಳೆದುಕೊಂಡು ಅಂಡಾ ಸೆಲ್ ಬಳಿ ಬಂದು ಬಿದ್ದಿತ್ತು. 8 ದಿನಗಳ ನಂತರ ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.
ಉಗ್ರರು ಸೇರಿದಂತೆ ಕ್ರಿಮಿನಲ್ ಗಳು ಇರುವ ಜೈಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕ್ಯಾಮರಾ ಇದ್ದರೂ ಡ್ರೋಣ್ ಬಂದು ಬಿದ್ದಿರುವುದು 8 ದಿನಗಳ ನಂತರ ಪತ್ತೆಯಾಗಿದೆ ಅಂದರೆ ಭದ್ರತಾ ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿಸುವಂತಿದೆ.