ಭಾಷಣ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ನುಡಿಸಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿಧಾನಸಭಾ ಅಧಿವೇಶನದ ಮಧ್ಯದಲ್ಲೇ ಹೊರನಡೆದ ಘಟನೆ ಸೋಮವಾರ ನಡೆದಿದೆ.
ಸಂಪ್ರದಾಯದ ಪ್ರಕಾರ ತಮಿಳುನಾಡು ವಿಧಾನಸಭೆ ಅಧಿವೇಶನದ ಆರಂಭದಲ್ಲಿ ತಮಿಳಿನ ‘ವಲ್ತು’ ಗೀತೆಯನ್ನು ಹಾಡಲಾಗುತ್ತದೆ. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತದೆ. ಆದರೆ ರಾಜ್ಯಪಾಲ ರವಿ ಆರಂಭ ಮತ್ತು ಅಂತ್ಯ ಎರಡೂ ಬಾರಿಯೂ ರಾಷ್ಟ್ರಗೀತೆ ನುಡಿಸಬೇಕು ಎಂದು ಪಟ್ಟು ಹಿಡಿದರು.
ಎರಡು ಬಾರಿ ರಾಷ್ಟ್ರಗೀತೆ ನುಡಿಸದೇ ತಮಿಳುನಾಡು ವಿಧಾನಸಭೆಯಲ್ಲಿ ರಾಷ್ಟ್ರಗೀತೆಗೆ ಅಪಮಾನಿಸಲಾಗಿದೆ ಎಂದು ರಾಜ್ಯಪಾಲರು ಆರೋಪಿಸಿದರು. ಸಂವಿಧಾನದ ಪ್ರಕಾರ ರಾಷ್ಟ್ರಗೀತೆಗೆ ಮೊದಲು ಆದ್ಯತೆ ನೀಡಬೇಕು. ದೇಶದ ಎಲ್ಲಾ ವಿಧಾನಸಭೆಗಳಲ್ಲೂ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತದೆ ಎಂದು ಅವರು ವಾದಿಸಿದರು.
ಇದೊಂದು ಆತಂಕದ ವಿಷಯವಾಗಿದ್ದು, ಇಲ್ಲಿ ರಾಜಕೀಯ ಪಕ್ಷಗಳು ಮುಖ್ಯವಲ್ಲ ಎಂದು ರಾಜ್ಯಪಾಲರು ಹೇಳಿಕೆಯಲ್ಲಿ ತಿಳಿಸಿದರು. ಆದರೆ ರಾಜ್ಯಪಾಲರ ವರ್ತನೆ ಮಕ್ಕಳಾಟದಂತೆ ಇದೆ ಎಂದು ಆಡಳಿತಾರೂಢ ಡಿಎಂಕೆ ಪಕ್ಷ ತಿರುಗೇಟು ನೀಡಿದೆ.
ಸಂವಿಧಾನದ ಬಗ್ಗೆ ಮಾತನಾಡುವ ರಾಜ್ಯಪಾಲರು ಸರ್ಕಾರವನ್ನು ಉದ್ದೇಶಿಸಿ ವಿಧಾನಸಭೆಯಲ್ಲಿ ಭಾಷಣ ಮಾಡಬೇಕಿತ್ತು. ಆದರೆ ಅವರು ಭಾಷಣ ಮಾಡದೇ ರಾಜ್ಯಪಾಲರಾಗಿ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಇದು ಅವರ ವರ್ತನೆಯನ್ನು ತೋರುತ್ತದೆ ಎಂದು ಸಿಎಂ ಎಂಕೆ ಸ್ಟಾಲಿನ್ ಟೀಕಿಸಿದ್ದಾರೆ.
ರಾಜ್ಯಪಾಲರು ಪದೇಪದೆ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ತಮಿಳುನಾಡಿನ ಜನತೆಯನ್ನು ಅಪಮಾನಿಸುತ್ತಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರದ ನಡೆಯನ್ನು ತಿರಸ್ಕರಿಸುವುದು ಅವರಿಗೆ ಅಭ್ಯಾಸವಾಗಿದೆ. ಅವರು ರಾಜಕೀಯ ಪಕ್ಷದ ವಕ್ತಾರನಂತೆ ವರ್ತಿಸುತ್ತಿರುವುದು ಎಲ್ಲರಿಗೂ ತಿಳಿದಿದೆ ಎಂದು ಸ್ಟಾಲಿನ್ ಹೇಳಿದರು.