ವೈಮಾನಿಕ ಪ್ರದರ್ಶನ ವೀಕ್ಷಿಸಲು ತೆರಳಿದ್ದ ಮೂವರು ಬಿಸಿಲಿನ ಝಳಕ್ಕೆ ಮೃತಪಟ್ಟಿದ್ದು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಭಾನುವಾರ ಸಂಭವಿಸಿದೆ.
92ನೇ ಭಾರತೀಯ ವಾಯುಪಡೆ ದಿನಾಚರಣೆ ಅಂಗವಾಗಿ ಭಾನುವಾರ ಮರೀನಾ ಬೀಚ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಏರ್ ಶೋನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬಿಸಿಲಿನ ಝಳದ ತೀವ್ರತೆ ಎಷ್ಟಿತ್ತು ಅಂದರೆ ಬಂದ ಬಹುತೇಕ ಮಂದಿ ಛತ್ರಿ ಹಿಡಿದು ಏರ್ ಶೋ ವೀಕ್ಷಣೆಗೆ ಬಂದಿದ್ದರು. ಅಧಿಕಾರಿಗಳಿಗೆ ಮಾತ್ರ ನೆರಳಿನ ಆಸರೆ ಇದ್ದರೆ ಬಹುತೇಕ ಮಂದಿಗೆ ಯಾವುದೇ ಆಸರೆ ಇರಲಿಲ್ಲ. ಇದರಿಂದ 230ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಪೆರಂಗಲುತ್ತೂರು ನಿವಾಸಿ ಶ್ರೀನಿವಾಸ್ (48), ತಿರುವಟ್ಟಿಯೂರ್ ನಿವಾಸಿ (ಕಾರ್ತಿಕೇಯನ್) ಮತ್ತು ಕೊರುಕುಪ್ಪೆಟ್ ನಿವಾಸಿ ಜಾನ್ (56) ಮೃತಪಟ್ಟ ದುರ್ದೈವಿಗಳು.
ಏರ್ ಶೋನಲ್ಲಿ ರಾಫೆಲ್, ತೇಜಸ್, ಹಗುರ ಯುದ್ಧವಿಮಾನ ಪ್ರಚಂಡ್ ಮತ್ತು ಡಕೋಟಾ ಸೇರಿದಂತೆ 72 ವಿಮಾನಗಳು ಪಾಲ್ಗೊಂಡಿದ್ದವು. ಏರ್ ಶೋನಲ್ಲಿ ಸುಮಾರು 15 ಲಕ್ಷ ಜನರು ಪಾಲ್ಗೊಂಡಿದ್ದರು.
ವಾಯುಪಡೆಯ ಏರ್ ಶೋ ದೆಹಲಿ ಹೊರಭಾಗದಲ್ಲಿ ಮೂರನೇ ಬಾರಿ ಹಾಗೂ ದಕ್ಷಿಣ ಭಾರತದ ರಾಜ್ಯದಲ್ಲಿ ಇದೇ ಮೊದಲ ಬಾರಿ ಹಮ್ಮಿಕೊಂಡಿತ್ತು. 2023ರಲ್ಲಿ ಪ್ರಯಾಗ್ ರಾಜ್ ನಲ್ಲಿ ಮತ್ತು 2022ರಲ್ಲಿ ಚಂಡೀಗಢದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದಾಗ ಸೂಕ್ತ ಭದ್ರತಾ ವ್ಯವಸ್ಥೆ ಮಾಡದ ಡಿಎಂಕೆ ಸರ್ಕಾರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.