Friday, May 17, 2024
Google search engine
Homeತಾಜಾ ಸುದ್ದಿಚಿಕ್ಕಬಳ್ಳಾಪುರದಲ್ಲಿ ರಕ್ಷಾರಾಮಯ್ಯ ಗೆಲುವಿಗೆ ವರ, ಸುಧಾಕರ್ ಗೆ ಶಾಪ?

ಚಿಕ್ಕಬಳ್ಳಾಪುರದಲ್ಲಿ ರಕ್ಷಾರಾಮಯ್ಯ ಗೆಲುವಿಗೆ ವರ, ಸುಧಾಕರ್ ಗೆ ಶಾಪ?

ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಪ್ರಚಾರ ಕಾವು ಹೆಚ್ಚತೊಡಗಿದೆ. ವಿಧಾನಸಭೆಯಲ್ಲಿ ಸೋಲುಂಡ ನಂತರ ಲೋಕಸಭೆಗೆ ಮಾಜಿ ಸಚಿವ ಕೆ.ಸುಧಾಕರ್ ಅಖಾಡಕ್ಕೆ ಇಳಿದಿದ್ದರೆ, ಹೊಸ ಮುಖ ರಕ್ಷಾ ರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಎಂ.ಎಸ್. ರಾಮಯ್ಯ ಕುಟುಂಬದ ಕುಡಿ ರಕ್ಷಾ ರಾಮಯ್ಯ ಜಿಲ್ಲೆಯ ಜನತೆಗೆ ಹೊಸಬರಾಗಿದ್ದಾರೆ. ಆದರೆ ಇದೇ ಅವರಿಗೆ ವರವಾಗಿದ್ದರೆ, ಕೊರೊನಾ ಸಮಯದಲ್ಲಿ ಮಾಡಿದ ಭ್ರಷ್ಟಾಚಾರ ಹಾಗೂ ದೌರ್ಜನ್ಯವೇ ಕೆ.ಸುಧಾಕರ್ ಪಾಲಿಗೆ ಶಾಪವಾಗುವ ಸಾಧ್ಯತೆ ಹೆಚ್ಚಾಗಿದೆ.

ಒಂದು ಕಡೆ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಪರ ಪ್ರಚಾರಕ್ಕೆ ಪ್ರಧಾನಿ ಮೋದಿ ಬರುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪರ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕಿಳಿದಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕುತೂಹಲ ಮೂಡಿಸಿದೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಎರಡು ಬಾರಿ ವೀರಪ್ಪ ಮೊಯ್ಲಿ ಸತತವಾಗಿ ಗೆದ್ದುಕೊಂಡು ಬಂದಿದ್ದರು. ಕಳೆದ ಬಾರಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡಿದ್ದರೆ, ಬಿಜೆಪಿಯಿಂದ ಗೆದ್ದುಕೊಂಡು ಬಂದಿದ್ದ ಬಿಎನ್ ಬಚ್ಚೇಗೌಡ ಇದೀಗ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಪುತ್ರ ಶರತ್ ಬಚ್ಚೇಗೌಡ ಕಾಂಗ್ರೆಸ್ ನಿಂದ ಹೊಸಕೋಟೆ ಶಾಸಕರಾಗಿದ್ದಾರೆ.

ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಗೆದ್ದು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಅಲ್ಲದೇ ಚಿಕ್ಕಬಳ್ಳಾಪುರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಗೆಲುವು ಪಡೆದಿದೆ. ಆದ್ದರಿಂದ ಈ ಬಾರಿ ಸಹಜವಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಮೇಲುಗೈ ಪಡೆಯುವ ನಿರೀಕ್ಷೆ ಇದೆ.

ಜಾತಿ ಲೆಕ್ಕಾಚಾರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ಹೊಸಕೋಟೆ ಮತ್ತು ದೇವನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 20 ಲಕ್ಷ ಮತದಾರರಿದ್ದಾರೆ. ಇದರಲ್ಲಿ ಪುರುಷರು 9,80,250, ಮಹಿಳೆಯರು 9,70,150 ಮತ್ತು ಯುವ ಮತದಾರರು 32,000 ಸಂಖ್ಯೆಯಲ್ಲಿದ್ದಾರೆ.

ಎಸ್ಸಿ-ಎಸ್ಟಿ 6.50 ಲಕ್ಷ, ಒಕ್ಕಲಿಗ 4.20 ಲಕ್ಷ, ಕುರುಬ 2.10 ಲಕ್ಷ, ಅಲ್ಪ ಸಂಖ್ಯಾತರು 2 ಲಕ್ಷ, ಬಲಿಜ 1.40 ಲಕ್ಷ, ಗೊಲ್ಲ 80 ಸಾವಿರ ಮತದಾರರಿದ್ದಾರೆ.

ದಲಿತರಲ್ಲಿ ಎಸ್ಸಿ, ಕುರುಬಮ ಬಲಿಜ, ಗೊಲ್ಲ ಮತ್ತು ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪರ ವಾಲುವ ಸಾಧ್ಯತೆ ಇದೆ. ಈಗಾಗಲೇ ದಲಿತ ಸಂಘಟನೆಗಳು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ಕುರುಬ ಸಮುದಾಯ, ರಕ್ಷಾ ರಾಮಯ್ಯ ಬಲಿಜ ಸಮುದಾಯಕ್ಕೆ ಸೇರಿರುವುದರಿಂದ ಅವರ ಸಮುದಾಯದ ಸಂಪೂರ್ಣ ಮತ ಗಳಿಸುವ ಸಾಧ್ಯತೆ ಇದೆ. ಅಲ್ಪ ಸಂಖ್ಯಾತರ ಮತ ಬೇಡ ಎಂದು ಬಿಜೆಪಿ ಹೇಳಿಕೊಳ್ಳುವುದರಿಂದ ಈ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ ಅಭ್ಯರ್ಥಿ ಪರವಾಗುವ ಸಾಧ್ಯತೆ ಇದೆ.

ಯಲಹಂಕ ಮತ್ತು ನೆಲಮಂಗಲದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿಗೆ ಸಮೀಪವಾಗಿರುವ ಯಲಹಂಕದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಅಲ್ಲದೇ ಒಕ್ಕಲಿಗರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಬಿಜೆಪಿ ಮೇಲುಗೈ ಪಡೆಯುವ ಸಾಧ್ಯತೆ ಇದೆ. ಆದರೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ತಮ್ಮ ಮಗ ಅಲೋಕ್ ಗೆ ಟಿಕೆಟ್ ಆಕಾಂಕ್ಷಿಯಾಗಿದ್ದರಿಂದ ಸುಧಾಕರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇವರು ತಟಸ್ಥರಾದರೆ ಸುಧಾಕರ್ ಗೆ ಇಲ್ಲೂ ಹಿನ್ನಡೆ ಆಗುವ ಸಾಧ್ಯತೆ ಇದೆ.

ಸುಧಾಕರ್ ಹಿನ್ನಡೆಗೆ ಕಾರಣ

ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆ. ಸುಧಾಕರ್ ತಮ್ಮದೇ ಸಮುದಾಯದ ಅಸಮಾಧಾನ ಎದುರಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಮುದಾಯವಿದೆ. ಅಲ್ಲದೇ ರೈತರಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರು ಕೇಂದ್ರದ ಬೆಲೆ ಏರಿಕೆ ವಿರುದ್ಧ ಒಂದು ಕಡೆ ಅಸಮಾಧಾನಗೊಂಡಿದ್ದರೆ, ಮತ್ತೊಂದೆಡೆ ಸುಧಾಕರ್ ಅವರ ದೌರ್ಜನ್ಯ ಹಾಗೂ ಕೊರೊನಾ ಸಮಯದಲ್ಲಿ ಮಾಡಿದ ಭ್ರಷ್ಟಾಚಾರದಿಂದ ಅಸಮಾಧಾನಗೊಂಡಿದ್ದಾರೆ. ವಿಧಾನಸಭೆಯಲ್ಲಿ ಸೋತಿರುವ ಸುಧಾಕರ್ ಗೆ ಲೋಕಸಭೆಯಲ್ಲೂ ಸೋಲಾಗಬಹುದು ಎಂದು ಹೇಳಲಾಗುತ್ತಿದೆ.

ಆದರೆ ಸುಧಾಕರ್ ಹಣದ ಬಲದ ಜೊತೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದರಿಂದ ಅದರ ಲಾಭ ಪಡೆಯುವುದನ್ನು ತಳ್ಳಿಹಾಕುವಂತಿಲ್ಲ. ಮೋದಿ ಅಲೆ ಕೆಲಸ ಮಾಡಿದರೆ ಒಕ್ಕಲಿಗರು ಅಲ್ಲದೇ ಬಿಜೆಪಿ ಪರ ಮತಗಳನ್ನು ಉಳಿಸಿಕೊಳ್ಳಬಹುದಾಗಿದೆ.

ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಜೆಡಿಎಸ್ ಹಾಗೂ ಜೆಡಿಎಸ್ ನಲ್ಲಿರುವ ಒಕ್ಕಲಿಗ ಮತಗಳನ್ನೂ ಪಡೆಯುವ ಭರವಸೆ ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಜೊತೆ ಮೈತ್ರಿ ಆದಾಗ ಬಿಜೆಪಿಗೆ ಮತ ಚಲಾಯಿಸಿದ್ದ ಜೆಡಿಎಸ್ ಕಾರ್ಯಕರ್ತರು ಇದೀಗ ಬಿಜೆಪಿ ವಿರುದ್ಧ ಮತ ಚಲಾಯಿಸಿದರೆ ಸುಧಾಕರ್ ಗೆ ನುಂಗಲಾರದ ತುತ್ತಾಗಲಿದೆ. ಈ ಮತಗಳು ಚದುರದಂತೆ ಮಾಡಲು ಸ್ವತಃ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡರೇ ಸ್ವತಃ ಅಖಾಡಕ್ಕೆ ಇಳಿದಿದ್ದಾರೆ.

ರಕ್ಷಾ ರಾಮಯ್ಯ ಮೇಲುಗೈ ಯಾಕೆ?

ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖ ಆಗಿರುವುದೇ ದೊಡ್ಡ ಲಾಭವಾಗಿದೆ. ಎಂ.ಎಸ್. ರಾಮಯ್ಯ ಕುಟುಂಬದ ಕುಡಿ ಅಲ್ಲದೇ ಮಾಜಿ ಸಚಿವ ಎಂ.ಆರ್. ಸೀತಾರಾಂ ಅವರ ಅನುಭವಗಳ ಗರಡಿಯಲ್ಲಿ ಪಳಗುತ್ತಿರುವ ರಕ್ಷಾ ರಾಮಯ್ಯ ಭವಿಷ್ಯದ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ರಕ್ಷಾ ರಾಮಯ್ಯ ಅವರಿಗೆ ಅನುಭವದ ಕೊರತೆ ಇದ್ದರೂ ಕಳಂಕ ಇಲ್ಲದ ವ್ಯಕ್ತಿಯಾಗಿ ಜನರಿಗೆ ಹತ್ತಿರವಾಗುತ್ತಿದ್ದಾರೆ. ಅಲ್ಲದೇ ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮುದಾಯಕ್ಕೆ ಸೇರಿರುವುದರಿಂದ ತಮ್ಮ ಸಮುದಾಯದ ಬೆಂಬಲ ಪಡೆಯಲಿದ್ದಾರೆ.

ಜನತೆ ಅಪೇಕ್ಷೆ ಏನು?

ಬಯಲು ಸೀಮೆಯಾದ ಚಿಕ್ಕಬಳ್ಳಾಪುರದ ಜನತೆ ನೀರಿನ ಸಮಸ್ಯೆಗೆ ಮುಕ್ತಿಗಾಗಿ ಹೋರಾಟ ನಡೆಸಿದ್ದಾರೆ. ಕೃಷಿ ಚಟುವಟಿಕೆ ಹೆಚ್ಚಾಗಿರುವುದರಿಂದ ಹಾಗೂ ಬೆಂಗಳೂರಿಗೆ ಸಮೀಪದ ಜಿಲ್ಲೆಯಾಗಿರುವುದರಿಂದ ಮೂಲಭೂತ ಸೌಕರ್ಯಗಳಿಗೂ ಬೇಡಿಕೆ ಹೆಚ್ಚಿದೆ.

ಏತ ನೀರಾವರಿ, ಎಚ್.ಎನ್. ವ್ಯಾಲಿ, ಕೆಸಿ ವ್ಯಾಲಿಯಿಂದ ಕಾಂಗ್ರೆಸ್ ಸರ್ಕಾರ ನೀರಿನ ಸಮಸ್ಯೆ ಬಗೆಹರಿಸಲು ಭರವಸೆ ನೀಡಿದೆ. ಆದರೆ ಅದು ಸಮರ್ಪಕವಾಗಿ ಕಾರ್ಯಗತ ಆಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.  ಏತ ನೀರಾವರಿ ಯೋಜನೆ ಆರಂಭವಾಗಿ 11 ವರ್ಷ ಕಳೆದರೂ ಇನ್ನೂ ನೀರು ಬಂದಿಲ್ಲ. ಎಚ್.ಎನ್. ವ್ಯಾಲಿ ಮತ್ತು ಕೆಸಿ ವ್ಯಾಲಿ ನೀರು ಬಂದರೂ ಮೂರನೇ ಶುದ್ದೀಕರಣ ಘಟಕ ಸ್ಥಾಪಿಸದೇ ಕೊಳಚೆ ನೀರನ್ನೇ ಬಿಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಪ್ರವಾಸೋದ್ಯಮ ಅಭಿವೃದ್ಧಿ, ಮೆಟ್ರೋ ರೈಲು ವಿಸ್ತರಣೆ ಮುಂತಾದ ಬೇಡಿಕೆಗಳು ಸಾಕಷ್ಟಿವೆ. ಈ ಎಲ್ಲಾ ಭರವಸೆ ಈಡೇರಿಸುವ ನಾಯಕನಿಗೆ ಜನ ಮನ್ನಣೆ ಹಾಕಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments