ಮತಯಂತ್ರಗಳ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಡಾ.ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಇದರಿಂದಾಗಿ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯ ಹಾದಿ ಮತ್ತಷ್ಟು ಸುಗಮವಾಗಿದೆ.
ಈ ಹಿಂದೆ ಆಂದ್ರದಲ್ಲಿನ ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ರಾಜಕೀಯ ನಾಯಕರಾದ ಚಂದ್ರಬಾಬು ನಾಯ್ಡು ಸೋತಾಗ ಮತ್ತು ಜಗನ್ ಮೋಹನ್ ರೆಡ್ಡಿ ಇತ್ತೀಚಿನ ಚುನಾವಣೆಗಳಲ್ಲಿ ಸೋತಾಗ ಅವರೂ ಸಹ ಒಬ್ಬರಿಗೊಬ್ಬರು ಇವಿಎಂ ಗಳನ್ನು ತಿರುಚಬಹುದು ಎಂಬ ಆರೋಪ-ಪ್ರತ್ಯರೋಪಗಳ ಸ್ಮರಿಸಿದ ನ್ಯಾಯಾದೀಶರು ಅರ್ಜಿದಾರರ ವಾದವನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ತಿರುಚಿಲ್ಲ, ಸೋತಾಗ ಇವಿಎಂಗಳನ್ನು ತಿರುಚಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇಂಥ ವಾದ ಮಂಡಿಸಲು ಇದು ಸೂಕ್ತ ಜಾಗ ಅಲ್ಲ ಎಂದು ವಿಭಾಗೀಯ ಪೀಠ ಇದೇ ವೇಳೆ ಅಭಿಪ್ರಾಯಪಟ್ಟಿತು.
ಅರ್ಜಿದಾರರು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಪುನಃ ಸ್ಥಾಪಿಸಬೇಕು ಎಂಬ ಕೋರಿಕೆಯೊಂದಿಗೆ, ಚುನಾವಣೆಯ ಸಮಯದಲ್ಲಿ ಹಣ, ಮದ್ಯ ಸೇರಿದಂತೆ ಆಮಿಷಗಳನ್ನು ಒಡ್ಡುವುದು ಸಾಬೀತಾದಲ್ಲಿ ಅಭ್ಯರ್ಥಿಗಳನ್ನು ಕನಿಷ್ಠ 5 ವರ್ಷ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮತದಾರರಿಗೆ ಶಿಕ್ಷಣ ಕಾರ್ಯಕ್ರಮ ಆಯೋಜಿಸಬೇಕು. ರಾಜಕೀಯ ಪಕ್ಷಗಳ ನಿಧಿಯನ್ನು ಪರಿಶೀಲಿಸಲು ತನಿಖಾ ವ್ಯವಸ್ಥೆ ರೂಪಿಸಬೇಕು. ಚುನಾವಣಾ ಸಂಬಂಧಿ ಹಿಂಸಾಚಾರಗಳನ್ನು ತಡೆಗಟ್ಟಲು ನೀತಿ ರೂಪಿಸಬೇಕು ಎಂದು ಮನವಿ ಮಾಡಿದ್ದರು.
ಈ ಎಲ್ಲಾ ಕೋರಿಕೆಗಳನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ರಾಜಕೀಯ ಪಕ್ಷಗಳಿಗೆ ಈ ವ್ಯವಸ್ಥೆಯಿಂದ ಯಾವುದೇ ತೊಂದರೆ ಇಲ್ಲ, ನಿಮಗೆ ಸಮಸ್ಯೆ ಇದೆ ಎಂದು ಅಭಿಪ್ರಾಯಪಟ್ಟಿತಲ್ಲದೆ, ಈ ಎಲ್ಲಾ ಕೋರಿಕೆಗಳನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ನಾವು ಇದನ್ನು ತಳ್ಳಿಹಾಕುತ್ತಿದ್ದೇವೆ. ನೀವು ಇದನ್ನೆಲ್ಲ ವಾದಿಸುವ ಸ್ಥಳ ಇದು ಅಲ್ಲ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿ ಆದೇಶಿಸಿತು.