ಬಾಂಗ್ಲಾದೇಶದ ಢಾಕಾದಲ್ಲಿ ವಾಸವಾಗಿರುವ ಖ್ಯಾತ ಹಿಂದೂ ಜಾನಪದ ಗಾಯಕ ರಾಹುಲ್ ಆನಂದ್ ಅವರ 140 ವರ್ಷಗಳ ಪುರಾತನ ಮನೆಯನ್ನು ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಹಿಂಸಾಚಾರ ಹೆಚ್ಚಾಗುತ್ತಿದ್ದು, ಇಸ್ಕಾನ್ ದೇವಸ್ಥಾನ ಸುಟ್ಟು ಹಾಕಿ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿತ್ತು. ಅಲ್ಲದೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳನ್ನು ಗುರಿಯಾಗಿ ದಾಳಿಗಳು ನಡೆಯುತ್ತಿವೆ.
ಗಾಯಕ ರಾಹುಲ್ ಆನಂದ್ ಹಿಂದೂ ಜಾನಪದ ಗಾಯಕ ಎಂದೇ ಖ್ಯಾತರಾಗಿದ್ದು, `ಜೊಲಾರ್ ಗಾನ್’ ಎಂಬ ಸಂಸ್ಥೆ ಮೂಲಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.
140 ವರ್ಷಗಳ ಪುರಾತನ ನಿವಾಸದಲ್ಲಿ ವರ್ಷಪೂರ್ತಿ ಜಾನಪದ ಗಾಯನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಕಾರ್ಯಕ್ರಮ ಎಷ್ಟು ಜನಪ್ರಿಯವಾಗಿತ್ತು ಅಂದರೆ ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುಯೆಲ್ ಮಾರನ್ 2023ರಲ್ಲಿ ಬಾಂಗ್ಲಾಗೆ ಭೇಟಿ ನೀಡಿದ್ದಾಗ ಇಲ್ಲಿಗೆ ಭೇಟಿ ನೀಡಿದ್ದರು.
ಮನೆಯಲ್ಲಿ 3000ಕ್ಕೂ ಅಧಿಕ ಸಂಗೀತ ಉಪಕರಣಗಳು ಇದ್ದವು. ಇವುಗಳನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಅಲ್ಲದೇ ಮನೆಯಲ್ಲಿ ಸಿಕ್ಕಿದ ವಸ್ತುಗಳನ್ನೆಲ್ಲಾ ದೋಚಿ ಪರಾರಿಯಾಗಿದ್ದಾರೆ.