ಉತ್ತರಾಖಂಡ್ ನ ಚಿಮೊಲಿಯಲ್ಲಿ ಶುಕ್ರವಾರ ಬಿದ್ದ ಹಿಮಪಾತದಲ್ಲಿ 4 ಮಂದಿ ಮೃತಪಟ್ಟಿದ್ದು, 5 ಮಂದಿ ಇನ್ನೂ ನಾಪತ್ತೆಯಾಗಿದ್ದರೆ.
ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಹಿಮಪಾತ ಆಗಿದ್ದರಿಂದ 48 ಮಂದಿ ಸಿಲುಕಿದ್ದರು. ರಕ್ಷಣಾ ಪಡೆಗಳು 39 ಮಂದಿಯನ್ನು ಸುಮಾರು 24 ಗಂಟೆಗಳ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ.
ಮಾನಾದ ಇಂಡೋ-ಟಿಬೆಟ್ ಶಿಬಿರದಲ್ಲಿ ರಕ್ಷಿಸಲಾದ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ವೇಳೆ ನಾಲ್ವರು ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದರೀನಾಥ ಜಲಾಯಶದಿಂದ ಕೇವಲ 3 ಕಿ.ಮೀ. ದೂರದಲ್ಲಿ ಹಿಮಪಾತವಾಗಿದ್ದು, ಸುಮಾರು 7 ಅಡಿಗಳಷ್ಟು ಎತ್ತರ ಹಿಮ ಬಿದ್ದಿದೆ. ಅಲ್ಲದೇ ಘಟನಾ ಸ್ಥಳದಲ್ಲಿ ಹಿಮ ಆವರಿಸಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಸುಮಾರು 60ರಿಂದ 65 ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ನಾಪತ್ತೆಯಾಗಿರುವ ಇನ್ನೂ 5 ಮಂದಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಹಿಮಪಾತದ ವೇಳೆ ಸಿಲುಕಿರುವ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ದೆಹಲಿ ಮತ್ತು ಜಮ್ಮು ಕಾಶ್ಮೀರದವರು ಆಗಿದ್ದಾರೆ. ಸುಮಾರು ೧೦ ಕಾರ್ಮಿಕರ ಹೆಸರು ಗುರುತಿಸಲಾಗಿದ್ದು, ಉಳಿದವರನ್ನು ಆಯ ರಾಜ್ಯಗಳಿಂದ ಗುರುತಿಸಲಾಗಿದೆ.
ಇಂಡೋ-ಟಿಬೆಟ್ ಗಡಿ ಸಮುದ್ರ ಮಟ್ಟದಿಂದ ಸುಮಾರು 3200 ಅಡಿ ಎತ್ತರದಲ್ಲಿದೆ. ಈ ಹಿನ್ನೆಲೆಯಲ್ಲಿ ನೌಕಾಪಡೆಯ ಹೆಲಿಕಾಫ್ಟರ್ ಮೂಲಕ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಕೂಡಲೇ ಕಳುಹಿಸಿಕೊಡಲಾಯಿತು.


