ಮಾಂಸದಂಗಡಿಯಲ್ಲಿ ಕಟುಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಗೆಳತಿಯನ್ನು 40ರಿಂದ 50 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಕುಂತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ನರೇಶ್ ಬೆಂಗ್ರಾ ಎಂಬಾತನನ್ನು ಬಂಧಿಸಲಾಗಿದೆ. ಮೃತಪಟ್ಟ ಯುವತಿ ಅದೇ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಜರಿಯಾಗಢ್ ಪೊಲೀಸ್ ಠಾಣಾ ವ್ಯಾಪ್ತಿಯ ಜೊರ್ಡಾಗ್ ಗ್ರಾಮದಲ್ಲಿ ನಾಯಿ ಮಾಂಸದ ತುಂಡು ಹಿಡಿದುಕೊಂಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ನರೇಶ್ ಜಾರ್ಖಂಡ್ ನಲ್ಲಿ ವಾಸವಾಗಿದ್ದು, ಪದೇಪದೆ ತಮಿಳುನಾಡಿಗೆ ಹೋಗಿ ಬರುತ್ತಿದ್ದ. ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಯುವತಿ ಗಮನಕ್ಕೆ ತಾರದೇ ಮದುವೆ ಆಗಿದ್ದು, ಆಕೆಯನ್ನು ಊರಿಗೆ ಕರೆದುಕೊಂಡು ಬಂದಾಗ ಈ ಘಟನೆ ನಡೆದಿದೆ.
ನವೆಂಬರ್ ೮ರಂದು ಪತ್ನಿಯನ್ನು ಕರೆದುಕೊಂಡು ಬಂದಾಗ ಯುವತಿ ಮನೆಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ನರೇಶ್, ಆಕೆಯನ್ನು ಮನೆಯ ಸಮೀಪದ ಕಾಡಿಗೆ ಕರೆದೊಯ್ದು ಕೊಲೆ ಮಾಡಿ ಗುರುತು ಸಿಗಬಾರದು ಎಂದು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿದ್ದಾನೆ.
ತಮಿಳುನಾಡಿನಲ್ಲಿ ಕಟುಕನಾಗಿ ಕೆಲಸ ಮಾಡುತ್ತಿದ್ದ ನರೇಶ್, ಚಿಕನ್ ಕತ್ತರಿಸುವಲ್ಲಿ ತಜ್ಞನಾಗಿದ್ದ. ತನ್ನ ಕಾಯಕವನ್ನೇ ಗೆಳತಿ ಮೇಲೆ ಪ್ರಯೋಗಿಸಿದ್ದು, ಕಾಡುಪ್ರಾಣಿಗಳು ತಿಂದರೆ ಗುರುತು ಸಿಗುವುದಿಲ್ಲ ಎಂದು ಭಾವಿಸಿ ಕಾಡಿನಲ್ಲಿ ಮಾಂಸದ ತುಂಡುಗಳನ್ನು ಬಿಸಾಡಿದ್ದ. ಆದರೆ ನಾಯಿಯೊಂದು ಮಾಂಸದ ತುಂಡು ಹಿಡಿದು ಬೀದಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.